ಡೈಲಿ ವಾರ್ತೆ: ಫೆ./15/2026

ನೆಲಮಂಗಲ ಫ್ಲೈಓವರ್‌ನಲ್ಲಿ ಭೀಕರ ಅಪಘಾತ: ಡಿವೈಡರ್ ಹಾರಿ KSRTC ಬಸ್‌ಗೆ ಕಾರು ಡಿಕ್ಕಿ – ಐವರು ಯುವಕರು ಸ್ಥಳದಲ್ಲೇ ಸಾವು

ಬೆಂಗಳೂರು: ನಗರದ ಹೊರವಲಯದ ನೆಲಮಂಗಲದ ನವಯುಗ ಟೋಲ್ ಸಮೀಪದ ಫ್ಲೈಓವರ್ ಬಳಿ ನಡುರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಅತಿವೇಗವೇ ಅಪಘಾತಕ್ಕೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಶನಿವಾರ ಮಧ್ಯರಾತ್ರಿ ಸುಮಾರು 12 ಗಂಟೆ ವೇಳೆಗೆ ತುಮಕೂರು ರಸ್ತೆಯಿಂದ ಬೆಂಗಳೂರು ನಗರ ಕಡೆಗೆ ಟಾಟಾ ಇಂಡಿಕಾ ಕಾರಿನಲ್ಲಿ ತೆರಳುತ್ತಿದ್ದ ಯುವಕರು, ಜಿಂದಾಲ್ ಆಸ್ಪತ್ರೆ ಸಮೀಪ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಎದುರುಗಡೆಯಿಂದ ಬರುತ್ತಿದ್ದ KSRTC ಬಸ್‌ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸ ಎಷ್ಟೋ ಪ್ರಬಲವಾಗಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್ ಮುಂಭಾಗದ ಗಾಜು ಚೂರಾಗಿಯೇ ಹಾರಿಹೋಗಿದೆ.

ದುರಂತದಲ್ಲಿ ದೊಡ್ಡಬಳ್ಳಾಪುರ ಮೂಲದ ದುರ್ಗಾ ಪ್ರಸಾದ್ (20), ಕೇಶವ್ (19), ಲಲಿತ್ (22), ಹರ್ಷಿತ್ (20) ಸೇರಿದಂತೆ ಐವರು ಯುವಕರು ಮೃತಪಟ್ಟಿದ್ದಾರೆ.

ಹರ್ಷಿತ್ ಬೆಂಗಳೂರಿನ ರಾಜನಕುಂಟೆಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದರೆ, ಲಲಿತ್ ಸಿಸಿಟಿವಿ ಅಳವಡಿಕೆ ಕೆಲಸ ನಿರ್ವಹಿಸುತ್ತಿದ್ದನು ಎಂದು ತಿಳಿದುಬಂದಿದೆ.

ಅಪಘಾತದ ವೇಳೆ ಬಸ್‌ನಲ್ಲಿ 42 ಮಂದಿ ಪ್ರಯಾಣಿಕರು ಇದ್ದರು. ಬಸ್ ಚಾಲಕ ಮತ್ತು ಕಂಡೆಕ್ಟರ್ ಸೇರಿದಂತೆ ಮುಂಭಾಗದಲ್ಲಿ ಕುಳಿತಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ.

ಮೃತದೇಹಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ವಿಷಯ ತಿಳಿದು ಆಸ್ಪತ್ರೆಗೆ ಧಾವಿಸಿದ ಕುಟುಂಬಸ್ಥರ ಆಕ್ರಂದನ ಮನಕಲಕುವಂತಿತ್ತು.
ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.