

ಡೈಲಿ ವಾರ್ತೆ: ಫೆ./15/2026
ಕುಂದಾಪುರ| ಉಚಿತ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: 300 ಕೆ.ಜಿ ಅಕ್ಕಿ ಸಹಿತ ಆಟೋ ಚಾಲಕನ ಬಂಧನ

ಕುಂದಾಪುರ, ಫೆ.15: ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಕುಂದಾಪುರ ಪೊಲೀಸರು ಪತ್ತೆ ಹಚ್ಚಿದ್ದು, 300 ಕೆ.ಜಿ ಅಕ್ಕಿ ಸಹಿತ ಆಟೋ ರಿಕ್ಷಾ ಚಾಲಕನನ್ನು ಬಂಧಿಸಿದ್ದಾರೆ.
ಪಿರ್ಯಾದಿದಾರರಾದ ಆಹಾರ ನಿರೀಕ್ಷಕ ಸುರೇಶ್ ಎಚ್.ಎಸ್ ಅವರಿಗೆ ಶನಿವಾರ ಸಂಜೆ ಸುಮಾರು 6.30 ಗಂಟೆ ವೇಳೆಗೆ ಕುಂದಾಪುರ ತಾಲೂಕು ಕಸಬಾ ಗ್ರಾಮದ ರಿಂಗ್ ರಸ್ತೆ ಸಮೀಪ ಉಚಿತ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಕುಂದಾಪುರ ಪೊಲೀಸ್ ಠಾಣೆಯ ಪಿಎಸ್‌ಐ ನಂಜಾನಾಯ್ಕ್ ಎನ್ ಹಾಗೂ ಸಿಬ್ಬಂದಿಯವರೊಂದಿಗೆ ಸಂಜೆ 6.40ರ ಸುಮಾರಿಗೆ ಸ್ಥಳಕ್ಕೆ ತೆರಳಿ ನಿಗಾ ವಹಿಸಿದ್ದರು.
ಈ ವೇಳೆ ಖಾರ್ವಿಕೇರಿ ರಿಂಗ್ ರಸ್ತೆ ಕಡೆಯಿಂದ KA20AC2865 ನೋಂದಣಿ ಸಂಖ್ಯೆಯ ಬಜಾಜ್ ಮ್ಯಾಕ್ಸ್ ಕಂಪೆನಿಯ ಆಟೋ ರಿಕ್ಷಾ ಬರುತ್ತಿರುವುದನ್ನು ಗಮನಿಸಿ ವಾಹನವನ್ನು ತಡೆದು ಪರಿಶೀಲನೆ ನಡೆಸಲಾಯಿತು.
ಪರಿಶೀಲನೆ ವೇಳೆ ಆಟೋದಲ್ಲಿ ಉಚಿತ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು 8 ಪಾಲೀಥಿನ್ ಚೀಲಗಳಲ್ಲಿ ತುಂಬಿಸಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಬಂಧಿತನನ್ನು ಕೃಷ್ಣ ಖಾರ್ವಿ ಎಂದು ಗುರುತಿಸಲಾಗಿದ್ದು, ಯಾವುದೇ ಮಾನ್ಯ ಪರವಾನಿಗೆ ಇಲ್ಲದೇ 50 ಕೆ.ಜಿ ಯ 1 ಚೀಲ, 40 ಕೆ.ಜಿ ಯ 4 ಚೀಲಗಳು ಹಾಗೂ 30 ಕೆ.ಜಿ ಯ 3 ಚೀಲಗಳು ಸೇರಿದಂತೆ ಒಟ್ಟು 300 ಕೆ.ಜಿ ತೂಕದ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದನು.
ವಶಪಡಿಸಿಕೊಂಡ ಅಕ್ಕಿಯ ಅಂದಾಜು ಮೌಲ್ಯ ರೂ.7,200/- ಆಗಿದೆ.
ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 12/2026ರಂತೆ Essential Commodities Actನ ಕಲಂ 3, 6 ಮತ್ತು 7ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.