

ಡೈಲಿ ವಾರ್ತೆ: ಫೆ./15/2026
ಭಕ್ತಿಯ ಗೆಲುವು, ಕಲೆಯ ಪುನರ್ಜನ್ಮ: ಮಂದಾರ್ತಿ ರಥೋತ್ಸವದಲ್ಲಿ ‘ಯಕ್ಷ ಚಂದ್ರಿಕೆ’ ಶಶಿಕಾಂತ್ ಶೆಟ್ಟಿಯ ಭಾವಭರಿತ ಮರಳಿಕೆ

ಮಂದಾರ್ತಿ: ಭಕ್ತಿ, ಭಾವ ಮತ್ತು ಕಲೆಯ ಸಂಗಮವಾದ ಮಂದಾರ್ತಿ ರಥೋತ್ಸವ ಈ ಬಾರಿ ಭಕ್ತರಿಗೆ ಎರಡೆರಡು ಸಂಭ್ರಮವನ್ನು ತಂದಿತು. ಒಂದು ಕಡೆ ತಾಯಿ ಮಂದಾರ್ತಿ ಮಾತೆಯ ವೈಭವಮಯ ರಥೋತ್ಸವ, ಇನ್ನೊಂದು ಕಡೆ ಅನಾರೋಗ್ಯದ ಸಂಕಷ್ಟವನ್ನು ಜಯಿಸಿ ಮತ್ತೆ ಯಕ್ಷಗಾನ ಸೇವೆಗೆ ಮರಳಿದ ಯಕ್ಷ ಚಂದ್ರಿಕೆ ಶಶಿಕಾಂತ್ ಶೆಟ್ಟಿಯವರ ಭಾವನಾತ್ಮಕ ಪುನರಾಗಮನ ಭಕ್ತರನ್ನು ಕಣ್ಣೀರಾಗಿಸಿತು.

ರಥೋತ್ಸವದಂದು ತಾಯಿ ಮಂದಾರ್ತಿ ಮಾತೆ ದೇವಸ್ಥಾನಕ್ಕೆ ಮರಳುವಾಗ ವಸಂತ ಮಂಟಪದಲ್ಲಿ ವಿವಿಧ ಸೇವೆಗಳು ಜರುಗುವುದು ಸಂಪ್ರದಾಯ. ಯಕ್ಷಗಾನ ಪ್ರಿಯೆ ಮಂದಾರ್ತಿ ಮಾತೆಗೆ ಐದು ಮೇಳಗಳ ಆಯ್ದ ಕಲಾವಿದರು ಬಣ್ಣ ಹಚ್ಚಿ, ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಸೇವೆ ಸಲ್ಲಿಸುವುದು ಕ್ಷೇತ್ರದ ವಿಶೇಷ. ಮಂದಾರ್ತಿ ಕ್ಷೇತ್ರ ಮಹಾತ್ಮೆಯಲ್ಲಿ ಉಲ್ಲೇಖವಾಗಿರುವ ಐವರು ನಾಗಕನ್ಯೆಯರ ಕಥೆಯನ್ನು ಪ್ರತಿಬಿಂಬಿಸುವಂತೆ, ಈ ಬಾರಿ ನಡೆದ ಸೇವೆಯಲ್ಲಿ ಐವರು ನಾಗಕನ್ಯೆಯರ ಸ್ತ್ರೀವೇಷದಲ್ಲಿ ಶಶಿಕಾಂತ್ ಶೆಟ್ಟಿಯವರು ಒಬ್ಬರಾಗಿ ಸೇವೆ ಸಲ್ಲಿಸಿದರು.
ಸುಮಾರು ಎರಡು ದಶಕಗಳಿಂದ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮೇಳದಲ್ಲಿ ಪ್ರಧಾನ ಸ್ತ್ರೀವೇಷಧಾರಿಯಾಗಿ ಅಪಾರ ಜನಮನ್ನಣೆ ಗಳಿಸಿದ್ದ ಶಶಿಕಾಂತ್ ಶೆಟ್ಟಿ, ಪಾರಂಪರಿಕ ಹೆಜ್ಜೆ, ಭಾವಪೂರ್ಣ ಅಭಿನಯ ಮತ್ತು ಪೌರಾಣಿಕ ಪ್ರಸಂಗಗಳ ಆಳವಾದ ಅರಿವಿನಿಂದ ಲಕ್ಷಾಂತರ ಯಕ್ಷಗಾನ ಅಭಿಮಾನಿಗಳ ಮನಗೆದ್ದವರು.
ಆದರೆ ಕಳೆದ ತಿರುಗಾಟದಲ್ಲಿ ಮೇಳದ ಒಳರಾಜಕೀಯ ದಿಂದ ಬೇಸತ್ತು ಈ ವರ್ಷದ ತಿರುಗಾಟದಲ್ಲಿ ಸಾಲಿಗ್ರಾಮ ಮೇಳದಲ್ಲಿ ಬಣ್ಣ ಹಚ್ಚುವುದಿಲ್ಲ ಎಂದು ಸ್ವತಃ ವಿಡಿಯೋ ಮೂಲಕ ಘೋಷಿಸಿದ್ದರಿಂದ ಅಭಿಮಾನಿಗಳಲ್ಲಿ ಗೊಂದಲ ಮೂಡಿತ್ತು. ಬಳಿಕ “ಅತಿಥಿಯಾಗಿ ನನ್ನ ಯಕ್ಷಗಾನ ಕಲಾಸೇವೆ ಮುಂದುವರಿಯಲಿದೆ” ಎಂದು ಅವರು ಸ್ಪಷ್ಟಪಡಿಸಿದ್ದರು.
ಇದರ ಮಧ್ಯೆ ಕಳೆದ ಮಳೆಗಾಲದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಜೀವಮರಣದ ಹಂತ ತಲುಪಿದರೆನ್ನುವ ಮಟ್ಟಿಗೆ ಸುದ್ದಿ ಹಬ್ಬಿಕೊಂಡಿತ್ತು. ಅನೇಕ ಅಭಿಮಾನಿಗಳು, ಕಲಾಪ್ರೇಮಿಗಳು ಅವರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದರು. ವೈದ್ಯರ ಚಿಕಿತ್ಸೆಯೊಂದಿಗೆ ಭಕ್ತರ ಪ್ರಾರ್ಥನೆಯ ಫಲವಾಗಿ ಶಶಿಕಾಂತ್ ಶೆಟ್ಟಿ ನಿಧಾನವಾಗಿ ಚೇತರಿಸಿಕೊಂಡು ಮನೆಗೆ ಮರಳಿದರು. ವೈದ್ಯರ ಸೂಚನೆಯಂತೆ ಕಟ್ಟುನಿಟ್ಟಿನ ವಿಶ್ರಾಂತಿಯಲ್ಲಿ ಕಾಲ ಕಳೆದ ಅವರು, ಹೊರಜಗತ್ತಿನಿಂದ ದೂರವೇ ಉಳಿದಿದ್ದರು.
ಇದೀಗ ಮಂದಾರ್ತಿ ರಥೋತ್ಸವದ ಪವಿತ್ರ ಸಂದರ್ಭದಲ್ಲಿ ಮತ್ತೆ ಬಣ್ಣ ಹಚ್ಚಿ, ಗೆಜ್ಜೆ ಕಟ್ಟಿ ಯಕ್ಷಗಾನ ಸೇವೆ ಸಲ್ಲಿಸಿರುವುದು ಕೇವಲ ಕಲಾ ಕಾರ್ಯಕ್ರಮವಲ್ಲ; ಅದು ಭಕ್ತಿ, ಸಂಕಲ್ಪ ಮತ್ತು ಜೀವದ ಹೋರಾಟದ ಗೆಲುವಿನ ಪ್ರತೀಕವಾಗಿ ಪರಿಣಮಿಸಿದೆ.
ತಾಯಿ ಮಂದಾರ್ತಿಯ ಅನುಗ್ರಹದೊಂದಿಗೆ ಮತ್ತೆ ಸಂಪೂರ್ಣ ಆರೋಗ್ಯದಿಂದ ಯಕ್ಷಗಾನ ಸೇವೆ ಸಲ್ಲಿಸುವ ಅವಕಾಶ ದೊರಕಲಿ ಎಂಬುದು ಅಭಿಮಾನಿಗಳ ಹಾರೈಕೆ.
ಯಕ್ಷ ಚಂದ್ರಿಕೆ ಶಶಿಕಾಂತ್ ಶೆಟ್ಟಿಯವರ ಈ ಪುನರಾಗಮನ ಯಕ್ಷಗಾನ ಲೋಕಕ್ಕೆ ಹೊಸ ಉತ್ಸಾಹ ತುಂಬಿದ್ದು, “ಕಲೆಗೂ, ಭಕ್ತಿಗೂ ಅಂತ್ಯವಿಲ್ಲ” ಎಂಬ ಸಂದೇಶವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.