ಡೈಲಿ ವಾರ್ತೆ: 28/ಜುಲೈ /2024

ಶಿರೂರು ಗುಡ್ಡ ಕುಸಿತದಿಂದ ನಾಪತ್ತೆಯಾದ ಮೂವರ ಶೋಧ ಕಾರ್ಯಚರಣೆ ಸದ್ಯಕ್ಕೆ ಸ್ಥಗಿತ: ಜಿಲ್ಲಾಡಳಿತ, ಕಾರ್ಯಚರಣೆ ಯಶಸ್ವಿಯಾಗದಿದ್ದಕ್ಕೆ ಮುಳುಗು ತಜ್ಞ ಈಶ್ವರ ಮಲ್ಪೆ ಭಾವುಕ!

ಅಂಕೋಲಾ: ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿರುವ ಮೂವರು ಇನ್ನು ಸಿಕ್ಕಿಲ್ಲ. ಎಸ್​ಡಿಆರ್​​ಎಫ್, ಎನ್​ಡಿಆರ್​ಎಫ್​, ಡ್ರೋಣ್, ಹೆಲಿಕಾಪ್ಟರ್​, ಮುಳುಗು ತಜ್ಞರು ಸೇರಿ ಹಲವರು ಕಳೆದ 13 ದಿನಗಳಿಂದ ಶೋಧ ಕಾರ್ಯಚರಣೆ ನಡೆಸಿದರೂ ಸಹ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಒಂದೆಡೆ ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರಿಂದ ನದಿಯೊಳಗೆ ಹೋಗಲು ಸ್ಕೂಬಾ ಡೈ ತಂಡಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸದ್ಯಕ್ಕೆ ಕಾರ್ಯಚರಣೆ ಸ್ಥಗಿತಗೊಳಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಇನ್ನು ಶೋಧ ಕಾರ್ಯಾಚರಣೆ ಯಶಸ್ವಿಯಾಗದಿರುವುದಕ್ಕೆ ಮುಳುಗು ತಜ್ಞ ಈಶ್ವರ ಮಲ್ಪೆ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಈ ಹಿಂದೆ ಮಾಡಿದ ಬಹಳಷ್ಟು ಕಾರ್ಯಾಚಾರಣೆ ಯಶಸ್ಸು ಆಗಿದೆ. ಆದ್ರೆ, ಇಂದಿನ ಶೋಧ ಕಾರ್ಯಾಚರಣೆ ಯಶಸ್ವಿಯಾಗದಿರುವುದರಿಂದ ದುಃಖವಾಗಿದೆ. ನಿರಂತರ ಮಳೆಯಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಲೇ ಇದೆ. ನದಿ ನೀರಿನ ವೇಗ ಹೆಚ್ಚಿದೆ, ಕೆಸರುಮಯವಾಗಿದ್ದರಿಂದ ಸಕ್ಸಸ್ ಆಗಿಲ್ಲ. ಗಂಗಾವಳಿ ನದಿಯಲ್ಲಿ ಶೋಧ ಕಾರ್ಯಾಚರಣೆ ಯಶಸ್ಸು ಕಾಣಲಿಲ್ಲ. ನಾನು ನದಿಗೆ ಇಳಿದಾಗ ಬಂಡೆಗಲ್ಲು, ಮಣ್ಣು ಬಿಟ್ಟು ಬೇರೆ ಕಾಣಲಿಲ್ಲ. ಇಂದು ಶೋಧ ನಡೆಸಿದ ಪಾಯಿಂಟ್​ನಲ್ಲಿ ಆಲದ ಮರ ಸಿಕ್ಕಿದೆ. ನೀರಿನ ವೇಗ ಹೆಚ್ಚಾಗಿರುವುದರಿಂದ ನದಿ ಒಳಗೆ ಇರಲು ಆಗಲಿಲ್ಲ. ಕೆಸರು ನೀರು ಇರುವ ತನಕ ಕಾರ್ಯಾಚರಣೆ ಮಾಡುವುದು ಕಷ್ಟ. ನಾನು ನದಿ ಒಳಗೆ ಎಷ್ಟೇ ಇಳಿದರೂ ಸರಿಯಾಗಿ ಏನೂ ಕಾಣಲಿಲ್ಲ. ನದಿ ನೀರು ಕೆಸರುಮಯವಾಗಿರುವುದ ರಿಂದ ಸರಿಯಾಗಿ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.