ಡೈಲಿ ವಾರ್ತೆ: 29/ಜುಲೈ /2024
ಗೋಳ್ತಮಜಲು : ಜೆಮ್ ಆಂಗ್ಲ ಮಾಧ್ಯಮ ಶಾಲಾ ಬೆಳ್ಳಿ ಹಬ್ಬಕ್ಕೆ ಚಾಲನೆ. ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ
ಬಂಟ್ವಾಳ : ವಿದ್ಯಾರ್ಥಿಗಳು ತಮ್ಮ ತರಗತಿಯಲ್ಲಿನ ಗಣಿತ , ವಿಜ್ಞಾನ ಪಾಠದ ಬಳಿಕ ತಮ್ಮದೇ ಆದ ರೀತಿಯಲ್ಲಿ ಅನ್ವೇಷಕ ಬುದ್ದಿಯೊಂದಿಗೆ ಪರ್ಯಾಯ ಉತ್ತರಗಳನ್ನು ಕಂಡುಕೊಂಡರೆ ಅದು ಸಾರ್ಥಕ ಶಿಕ್ಷಣ ಎಂದು ಅಡ್ಯಾರು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಡಾ. ಮುಸ್ತಾಫ ಬಸ್ತಿಕೋಡಿ ಹೇಳಿದರು.
ಗೋಳ್ತಮಜಲು ಜೆಮ್ ಆಂಗ್ಲ ಮಾಧ್ಯಮ ಶಾಲೆಯ ರಜತ ಮಹೋತ್ಸವದ ಪ್ರಯುಕ್ತ ಶಾಲೆಯಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ರಸಪ್ರಶ್ನೆ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು
ಜೀವನದ ಎಲ್ಲಾ ರಂಗಗಳಲ್ಲಿಯೂ
ಕಂಪ್ಯೂಟರ್ ಅನಿವಾರ್ಯವಾಗಿದ್ದು ಅದನ್ನು ವಿದ್ಯಾರ್ಥಿಗಳು ಕಲಿಯುವುದು ಅವಶ್ಯಕ ಎಂದರು .
ಪ್ರಸಕ್ತ ಸಾಲಿನಲ್ಲಿ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ಜೆಮ್ ಪಬ್ಲಿಕ್ ಶಾಲೆಯು ಬೆಳ್ಳಿಹಬ್ಬದ ಲೋಗೋವನ್ನು ಅನಾವರಣಗೊಳಿಸಿದ ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಹ್ಲಾದ್ ಶೆಟ್ಟಿ ಜಡ್ತಿಲ ಮಾತನಾಡಿ, ಗ್ರಾಮೀಣ ಪ್ರದೇಶದ ಅನುದಾನರಹಿತ ಶಾಲೆಯೊಂದು ಇಪ್ಪತ್ತೈದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸುವುದು ಒಂದು ಯಶೋಗಾಥೆಯೇ ಸರಿ ಎಂದು ಅಭಿಪ್ರಾಯಪಟ್ಟರು.
ಶಾಲಾ ಆಡಳಿತ ಮಂಡಳಿಯ ವ್ಯವಸ್ಥಾಪಕ ಟ್ಟಸ್ಟಿ ಹಾಜಿ ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ರಸಪ್ರಶ್ನೆ ನಡೆಸಿಕೊಟ್ಟರು. ಶಾಲಾ ಪೋಷಕ ಮಂಡಳಿಯ ಅಧ್ಯಕ್ಷ ಹಮೀದ್ ಅಲಿ, ಅಬ್ದುಲ್ ಹಮೀದ್ ಗೋಳ್ತಮಜಲು ಉಪಸ್ಥಿತರಿದ್ದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಶ್ರೀ ರಾಜರಾಜೇಶ್ವರಿ ಸರಕಾರಿ ಪ್ರೌಢಶಾಲೆ ಪೊಳಲಿ ಪ್ರಥಮ ಸ್ಥಾನ, ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಪೆರಾಜೆ ದ್ವಿತೀಯ ಹಾಗೂ ಎಸ್ ವಿ ಎಸ್ ಪ್ರೌಢಶಾಲೆ ವಿದ್ಯಾಗಿರಿ ಬಂಟ್ವಾಳ ತೃತೀಯ ಸ್ಥಾನ ಪಡೆಯಿತು.
ಟ್ರಸ್ಟಿ ಅಹಮದ್ ಮುಸ್ಥಾಫ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಶಿಕ್ಷಕ ನಿರಂಜನ್ ಡಿ ಸ್ವಾಗತಿಸಿ, ಸಹ ಶಿಕ್ಷಕಿ ಜಯಂತಿ ವಂದಿಸಿದರು. ಶಿಕ್ಷಕಿಯರಾದ ತಾಹಿರಾ ಎಸ್ ಮತ್ತು ಗ್ರೆನಿಟಾ
ಕಾರ್ಯಕ್ರಮ ನಿರೂಪಿಸಿದರು.