ಡೈಲಿ ವಾರ್ತೆ: 30/ಜುಲೈ /2024

ವಯನಾಡು ಭೂಕುಸಿತ: ಮೃತಪಟ್ಟವರ ಸಂಖ್ಯೆ 49ಕ್ಕೆ ಏರಿಕೆ – ನೂರಾರು ಮಂದಿ ಸಿಲುಕಿರುವ ಶಂಕೆ, ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರು ಕಂಗಾಲು!

ವಯನಾಡು: ಕೇರಳದ ವಯನಾಡಿನಲ್ಲಿ ಭಾರಿ ಮಳೆಗೆ
ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದ್ದು, ಸದ್ಯದ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ ಇದೀಗ 49ಕ್ಕೆ ಏರಿಕೆಯಾಗಿದೆ.

ಮೃತರ ದೇಹಗಳು ಮೆಪ್ಪಾಡಿ ಆಸ್ಪತ್ರೆಯಲ್ಲಿದ್ದು, ಗುರುತು ಪತ್ತೆಹಚ್ಚುವಿಕೆಗೆ ಹರಸಾಹಸ ಪಡುವಂತಾಗಿದೆ. 100ಕ್ಕೂ ಅಧಿಕ ಮಂದಿ ಮಣ್ಣಿನಡಿ ಸಿಲುಕಿಕೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣ ತಂಡ ಸೇರಿದಂತೆ ಎಲ್ಲ ರಕ್ಷಣಾ ಏಜೆನ್ಸಿಗಳು ಸ್ಥಳದಲ್ಲಿ ಬೀಡುಬಿಟ್ಟು, ರಕ್ಷಣಾ ಕಾರ್ಯದಲ್ಲಿ ತೊಡಗಿವೆ.

ವಯನಾಡಿನಲ್ಲಿ ಮುಂಡಕ್ಕಯ್ಯಿಲ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಐವರು ಮಕ್ಕಳು ಸೇರಿ ಈವರೆಗೂ 49 ಮಂದಿ ಮೃತಪಟ್ಟಿದ್ದಾರೆ.

ಗುಡ್ಡ ಕುಸಿತದಿಂದ ನೂರಾರು ಮಂದಿ ಮಣ್ಣಿನಡಿ ಸಿಲುಕಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮೃತದೇಹಗಳನ್ನು ಹೊರತೆಗೆದಿರುವ ರಕ್ಷಣಾ ತಂಡ, ಇನ್ನೂ ಹಲವರು ಮಣ್ಣಿನಲ್ಲಿ ಸಿಲುಕಿರುವ ಶಂಕೆ ವ್ಯಕ್ತಪಡಿಸಿದೆ. ತಮ್ಮವರನ್ನು ಕಳೆದುಕೊಂಡಿರುವ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಮುಂದೆ ಏನು ಮಾಡಬೇಕೆಂಬುದು ತಿಳಿಯದೆ ಕಂಗಾಲಾಗಿದ್ದಾರೆ.

ಭೂಕುಸಿತದಿಂದ ಅಟ್ಟಮಾಲ ಮತ್ತು ಮುಂಡಕ್ಕಯ್ಯಿಲ್ ಪ್ರದೇಶಗಳು ಸೇರಿದಂತೆ ಜಿಲ್ಲೆಯ ಉಳಿದ ಭಾಗಗಳ ಸಂಪರ್ಕ ಕಡಿತಗೊಂಡಿವೆ. ಪಾಲಕ್ಕಾಡ್‌ನಲ್ಲಿ ಗುಡ್ಡಗಾಡು ಪ್ರದೇಶದ ಮೂರು ಸ್ಥಳಗಳಲ್ಲಿ ಮಂಗಳಂ ಅಣೆಕಟ್ಟು ಕುಸಿದಿದೆ.