ಡೈಲಿ ವಾರ್ತೆ: 31/ಜುಲೈ /2024
ಬಂಟ್ವಾಳದಲ್ಲಿ ಮುಳುಗಡೆಯಾದ ಪ್ರದೇಶಕ್ಕೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ
ಬಂಟ್ವಾಳ : ನೇತ್ರಾವತಿ ನದಿಯಲ್ಲಿ ನೀರು ಉಕ್ಕಿ ಹರಿದ ಪರಿಣಾಮ ಬಂಟ್ವಾಳದಲ್ಲಿ ಮುಳುಗಡೆಯಾದ ಪ್ರದೇಶಕ್ಕೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ತರೊಂದಿಗೆ ಸಮಾಲೋಚನೆ ನಡೆಸಿದರು.
ಈ ವೇಳೆ ಬಂಟ್ವಾಳ ಎಸ್.ವಿ.ಎಸ್. ಕನ್ನಡ ಮಾಧ್ಯಮ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರದಲ್ಲಿ ವಾಸ್ತವ್ಯವಿರುವ ಸಂತ್ರಸ್ತರಿಗೆ ನೀಡಿರುವ ಸೌಲಭ್ಯಗಳ ಬಗ್ಗೆ ತಹಶಿಲ್ದಾರ್ ಅರ್ಚನಾ ಭಟ್ ಅವರಿಂದ ಮಾಹಿತಿ ಪಡೆದುಕೊಂಡರು. ಅದರ ಜೊತೆಗೆ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿ, ಮುಳುಗಡೆಯಾದ ಮನೆಗಳ ಸ್ಥಿತಿಗತಿಯ ಕುರಿತು ವಿವರ ಪಡೆದುಕೊಂಡರು.
ನೆರೆ ಬಂದು ಹೋದ ಬಳಿಕ ಮನೆಯಲ್ಲಿರುವ ಕೆಸರನ್ನು ತೆಗಿಸಲು ಅಧಿಕಾರಿಗಳಿಗೆ ತಿಳಿಸಿದ್ದು, ಈಗಾಗಲೇ ನೆರೆ ಕಡಿಮೆಯಾದ ಮನೆಗಳ ಕೆಸರನ್ನು ತೆಗೆದು ಶುಚಿ ಮಾಡುವ ಕಾರ್ಯ ಕೈಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಕಮಿಷನರ್ ಹರ್ಷವರ್ದನ್ ಪಿ.ಜೆ, ಪ್ರೋಬೆಷನರಿ ಐ.ಎ.ಎಸ್ ಅಧಿಕಾರಿ ಶ್ರವಣ್, ತಹಶಿಲ್ದಾರ್ ಅರ್ಚನಾ ಭಟ್, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಆರೋಗ್ಯಾಧಿಕಾರಿ ಆಶೋಕ್ ರೈ, ಪುರಸಭಾ ಆರೋಗ್ಯ ಅಧಿಕಾರಿ ರತ್ನ ಪ್ರಸಾದ್, ಕಂದಾಯ ನಿರೀಕ್ಷಕ ಜನಾರ್ದನ, ವಿಜಯ್, ಸಿಬ್ಬಂದಿ ಸದಾಶಿವ ಉಪಸ್ಥಿತರಿದ್ದರು.