ಡೈಲಿ ವಾರ್ತೆ: 01/ ಆಗಸ್ಟ್/2024
ವಯನಾಡಿನಲ್ಲಿ ಭೂಕುಸಿತ ಸ್ಥಳಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ
ವಯನಾಡು: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಕೇರಳದ ವಯನಾಡಿನ ಚೂರಲ್ಮಲಾದಲ್ಲಿ ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಸೇತುವೆಯ ಮೇಲೆ ಸಾಗಿ ಪ್ರವಾಹದಪೀಡಿತ ಸ್ಥಳವನ್ನು ಪರಿಶೀಲಿಸಿದ ಅವರು ಸಂತ್ರಸ್ತರನ್ನು ಭೇಟಿಯಾಗಿದ್ದಾರೆ.
ಭಾರೀ ಮಳೆಯ ನಂತರ ಮಂಗಳವಾರ ಕೇರಳದ ವಯನಾಡಿನಲ್ಲಿ ಮೂರು ಭೂಕುಸಿತಗಳು ಸಂಭವಿಸಿದ ನಂತರ ಇದುವರೆಗೆ 256 ಜನರು ಸಾವನ್ನಪ್ಪಿದ್ದಾರೆ.
ಕೇರಳ ಜಿಲ್ಲೆಯ ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂಕುಸಿತದಿಂದ ಹೆಚ್ಚು ಹಾನಿಗೊಳಗಾಗಿವೆ. ಭೂಕುಸಿತದಲ್ಲಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಸೇನೆಯು ಸುಮಾರು 1,000 ಜನರನ್ನು ರಕ್ಷಿಸಲಾಗಿದೆ ಮತ್ತು 220 ಜನರು ಇನ್ನೂ ನಾಪತ್ತೆಯಾಗಿದ್ದಾರೆ.
ಈಗಾಗಲೇ ಸೈನ್ಯವು ಕೋಝಿಕ್ಕೋಡ್‌ನಲ್ಲಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ಸ್ಥಾಪಿಸಿದೆ ಎಂದು ಪಿಟಿಐ ವರದಿ ಮಾಡಿದೆ. ರಕ್ಷಣಾ ಕಾರ್ಯಾಚರಣೆಗೆ ಕನಿಷ್ಠ 1,500 ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮುಂದಿನ 2 ದಿನಗಳಲ್ಲಿ ವಯನಾಡ್ ಮತ್ತು ಇತರ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ರೆಡ್ ಅಲರ್ಟ್ ಘೋಷಿಸಲಾಗಿದೆ.