ಡೈಲಿವಾರ್ತೆ:14/ಮಾರ್ಚ್/2026

ನೆಲಮಂಗಲ ಬಳಿ ಎಲ್‌ಪಿಜಿ ಟ್ಯಾಂಕರ್ ಪಲ್ಟಿ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ!

​ನೆಲಮಂಗಲ: ಮಂಗಳೂರಿನಿಂದ ಬೆಂಗಳೂರಿಗೆ ಎಲ್‌ಪಿಜಿ ಗ್ಯಾಸ್ ಹೊತ್ತು ತರುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯ ಸೋಲೂರು ಬಳಿ ಪಲ್ಟಿಯಾದ ಘಟನೆ ನಡೆದಿದೆ.

ಅದೃಷ್ಟವಶಾತ್ ಅನಿಲ ಸೋರಿಕೆಯಾಗದ ಕಾರಣ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ವಿಪತ್ತು ತಪ್ಪಿದಂತಾಗಿದೆ.

​ಮಂಗಳೂರಿನಿಂದ ಸಿಲಿಕಾನ್ ಸಿಟಿ ಬೆಂಗಳೂರಿನತ್ತ ಬರುತ್ತಿದ್ದ ಟ್ಯಾಂಕರ್, ಸೋಲೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿ ಬಿದ್ದಿದೆ. ಪಲ್ಟಿಯಾದ ತೀವ್ರತೆಗೆ ರಸ್ತೆ ಸಂಚಾರ ಕೆಲ ಕಾಲ ಅಸ್ತವ್ಯಸ್ತಗೊಂಡಿತ್ತು. ಅನಿಲ ತುಂಬಿದ ಟ್ಯಾಂಕರ್ ಆಗಿದ್ದರಿಂದ ಸ್ಥಳೀಯರಲ್ಲಿ ಮತ್ತು ಹಾದಿಹೋಕರಲ್ಲಿ ಭಾರಿ ಆತಂಕ ಮೂಡಿತ್ತು.

​ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಮಾಗಡಿಯ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಕುದೂರು ಪೊಲೀಸ್ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಟೋಲ್ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದರು.
​ಅನಿಲ ಸೋರಿಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ತಪಾಸಣೆ ನಡೆಸಲಾಯಿತು.
​ಎರಡು ಬೃಹತ್ ಕ್ರೇನ್‌ಗಳನ್ನು ಬಳಸಿಕೊಂಡು ಬಹಳ ಜಾಗರೂಕತೆಯಿಂದ ಟ್ಯಾಂಕರ್ ಅನ್ನು ಮೇಲಕ್ಕೆ ಎತ್ತಿ ರಸ್ತೆಯಿಂದ ತೆರವುಗೊಳಿಸಲಾಯಿತು.

​ಅಗ್ನಿಶಾಮಕ ದಳದ ಸಮಯಪ್ರಜ್ಞೆ ಮತ್ತು ಪೊಲೀಸರ ತುರ್ತು ಕ್ರಮದಿಂದಾಗಿ ಯಾವುದೇ ಜೀವಹಾನಿ ಅಥವಾ ಅನಾಹುತವಿಲ್ಲದೆ ಪರಿಸ್ಥಿತಿಯನ್ನು ಸುಗಮಗೊಳಿಸಲಾಗಿದೆ.