ಡೈಲಿವಾರ್ತೆ:14/ಮಾರ್ಚ್/2026

ಇರಾನ್-ಇಸ್ರೇಲ್ ಸಂಘರ್ಷದ ಕ್ಷಿಪಣಿ ನೇರ ಉತ್ತರ ಕರ್ನಾಟಕ ಮೊಟ್ಟೆಗೆ – ಪೌಲ್ಟ್ರಿ ಉದ್ಯಮಕ್ಕೆ ಭಾರೀ ಹೊಡೆತ!

​ಉತ್ತರ ಕರ್ನಾಟಕ : ಜಾಗತಿಕ ರಾಜಕೀಯ ಉದ್ವಿಗ್ನತೆ ಈಗ ರಾಜ್ಯದ ಪೌಲ್ಟ್ರಿ ಉದ್ಯಮದ ಮೇಲೆ ಸುನಾಮಿಯಂತೆ ಅಪ್ಪಳಿಸಿದೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಗಲ್ಫ್ ರಾಷ್ಟ್ರಗಳಿಗೆ ಆಗುತ್ತಿದ್ದ ಮೊಟ್ಟೆ ರಫ್ತು ಸಂಪೂರ್ಣ ಸ್ಥಗಿತಗೊಂಡಿದ್ದು, ಉತ್ತರ ಕರ್ನಾಟಕದ ಹಾವೇರಿ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳ ಕೋಳಿ ಫಾರ್ಮ್ ಮಾಲೀಕರು ಬೀದಿಗೆ ಬರುವಂತಾಗಿದೆ.

​ರಫ್ತು ಸ್ಥಗಿತ: ನೆಲಕಚ್ಚಿದ ಮಾರುಕಟ್ಟೆ
​ಗಲ್ಫ್ ರಾಷ್ಟ್ರಗಳಾದ ಕತಾರ್, ಕುವೈತ್, ಸೌದಿ ಅರೇಬಿಯಾ ಮತ್ತು ದುಬೈಗೆ ರಾಜ್ಯದಿಂದ ಪ್ರತಿದಿನ ಕೋಟ್ಯಂತರ ಮೊಟ್ಟೆಗಳು ರಫ್ತಾಗುತ್ತಿದ್ದವು. ಆದರೆ ಯುದ್ಧದ ಹಿನ್ನೆಲೆಯಲ್ಲಿ ಹಡಗು ಮತ್ತು ವಿಮಾನಯಾನ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಆಮದು-ರಫ್ತು ವ್ಯವಹಾರಗಳು ಸ್ಥಗಿತಗೊಂಡಿವೆ. ಇದರಿಂದಾಗಿ ವಿದೇಶಕ್ಕೆ ಹೋಗಬೇಕಿದ್ದ ಮೊಟ್ಟೆಗಳು ಸ್ಥಳೀಯ ಮಾರುಕಟ್ಟೆಯಲ್ಲೇ ಉಳಿದುಕೊಂಡಿದ್ದು, ಬೇಡಿಕೆಗಿಂತ ಪೂರೈಕೆ ಹೆಚ್ಚಾದ ಕಾರಣ ದರ ತೀವ್ರವಾಗಿ ಕುಸಿದಿದೆ.

​ಹಾವೇರಿ ಜಿಲ್ಲೆಯಿಂದ ಪ್ರತಿದಿನ ಸುಮಾರು 80 ಲಕ್ಷ ಮೊಟ್ಟೆಗಳು ವಿದೇಶಕ್ಕೆ ರಫ್ತಾಗುತ್ತಿದ್ದವು. ಈ ಹಿಂದೆ ಒಂದು ಮೊಟ್ಟೆಗೆ 5 ರಿಂದ 6 ರೂಪಾಯಿ ಸಿಗುತ್ತಿತ್ತು. ಆದರೆ ಈಗ ರಫ್ತು ನಿಂತಿರುವ ಕಾರಣ ಬೆಲೆ ಕೇವಲ 4 ರೂಪಾಯಿಗೆ ಕುಸಿದಿದೆ. ಇದರಿಂದಾಗಿ ಫಾರ್ಮ್ ಮಾಲೀಕರು ಪ್ರತಿದಿನ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ.

​ಕೊಪ್ಪಳ ಜಿಲ್ಲೆಯಲ್ಲಿ ಪ್ರತಿದಿನ ಸುಮಾರು 40 ಲಕ್ಷ ಮೊಟ್ಟೆಗಳು ಉತ್ಪಾದನೆಯಾಗುತ್ತಿವೆ. ಮಾರಾಟವಾಗದ ಮೊಟ್ಟೆಗಳನ್ನು ಸಂಗ್ರಹಿಸಿಡಲು ಜಾಗವಿಲ್ಲದೆ, ಕೆಲವು ಕಡೆ ಹಳ್ಳ ತೋಡಿ ಹೂತು ಹಾಕಲಾಗುತ್ತಿದೆ. ಪ್ರತಿ ಫಾರ್ಮ್‌ಗೆ ದಿನಕ್ಕೆ 1 ರಿಂದ 1.5 ಲಕ್ಷ ರೂಪಾಯಿ ನಷ್ಟವಾಗುತ್ತಿದೆ ಎಂದು ಮಾಲೀಕರು ಕಣ್ಣೀರು ಹಾಕುತ್ತಿದ್ದಾರೆ.

​ಯಾದಗಿರಿ ಇಲ್ಲಿನ ಮೊಟ್ಟೆಗಳು ಪ್ರಮುಖವಾಗಿ ಗಲ್ಫ್ ರಾಷ್ಟ್ರಗಳ ಅಡುಗೆ ಮನೆ ಸೇರುತ್ತಿದ್ದವು. ರಫ್ತು ಸ್ಥಗಿತಗೊಂಡ ಕಾರಣ ಅನಿವಾರ್ಯವಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಸಿಕ್ಕಿದ ಬೆಲೆಗೆ ಮಾರಾಟ ಮಾಡುವ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ.

​ಸಾಲದ ಸುಳಿಯಲ್ಲಿ ಮಾಲೀಕರು:
​ಕೋಳಿ ಫಾರ್ಮ್ ನಡೆಸಲು ಬ್ಯಾಂಕ್‌ಗಳಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದಿರುವ ಉದ್ಯಮಿಗಳಿಗೆ ಈಗ ಅಸಲು ಮತ್ತು ಬಡ್ಡಿ ಕಟ್ಟುವುದು ದೊಡ್ಡ ಸವಾಲಾಗಿದೆ. ಸಿಲಿಂಡರ್ ಕೊರತೆ ಮತ್ತು ಕೋಳಿ ಆಹಾರದ ಬೆಲೆ ಏರಿಕೆಯ ನಡುವೆ ಈಗ ಮಾರಾಟವೂ ಇಲ್ಲದೆ ಉದ್ಯಮವು ಐಸಿಯು ಸೇರುವ ಹಂತಕ್ಕೆ ಬಂದಿದೆ.
​”ಯುದ್ಧದ ಕಾರ್ಮೋಡ ನಮ್ಮ ಬದುಕನ್ನೇ ಕತ್ತಲಾಗಿಸಿದೆ. ರಫ್ತು ನಿಂತಿರುವುದು ನಮ್ಮ ಬೆನ್ನೆಲುಬು ಮುರಿದಂತಾಗಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಪೌಲ್ಟ್ರಿ ಉದ್ಯಮದ ರಕ್ಷಣೆಗೆ ಮುಂದಾಗಬೇಕು,” ಎಂದು ಫಾರ್ಮ್ ಮಾಲೀಕರು ಮನವಿ ಮಾಡಿದ್ದಾರೆ.