ಡೈಲಿವಾರ್ತೆ:14/ಮಾರ್ಚ್/2026

ಬಂಟ್ವಾಳ| ಮಗಳ ಹುಟ್ಟುಹಬ್ಬದ ಸಿದ್ಧತೆಯಲ್ಲಿದ್ದ ಛಾಯಾಗ್ರಾಹಕ ಅಪಘಾತದಲ್ಲಿ ಬಲಿ

ಬಂಟ್ವಾಳ: ಎರಡು ಬೈಕುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಛಾಯಾಗ್ರಾಹಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಮೃತರನ್ನು ಪಾಣೆಮಂಗಳೂರು ಸಮೀಪದ ಶಂಭೂರು ನಿವಾಸಿ ರಕ್ಷಿತ್ ಶೆಟ್ಟಿ (43) ಎಂದು ಗುರುತಿಸಲಾಗಿದೆ.

ಶುಕ್ರವಾರ ರಾತ್ರಿ ಪಾಣೆಮಂಗಳೂರು ಸಮೀಪ ಎರಡು ಬೈಕುಗಳ ನಡುವೆ ಅಪಘಾತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡ ರಕ್ಷಿತ್ ಶೆಟ್ಟಿಯನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಶನಿವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರಕ್ಷಿತ್ ಶೆಟ್ಟಿ ಬಂಟ್ವಾಳ ವಲಯ ಛಾಯಾಗ್ರಾಹಕ ಸಂಘದ ಸಕ್ರಿಯ ಸದಸ್ಯರಾಗಿದ್ದು, ಉತ್ತಮ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದರು. ವಿಶೇಷವಾಗಿ, ಭಾನುವಾರ (ಮಾರ್ಚ್ 15) ತಮ್ಮ ಪುತ್ರಿಯ 10ನೇ ವರ್ಷದ ಹುಟ್ಟುಹಬ್ಬವನ್ನು ಮನೆಯಲ್ಲಿ ಆಚರಿಸಲು ಸಿದ್ಧತೆ ನಡೆಸುತ್ತಿದ್ದರು ಎಂಬುದು ಕುಟುಂಬದವರ ನೋವನ್ನು ಮತ್ತಷ್ಟು ಹೆಚ್ಚಿಸಿದೆ.
ಇವರ ಸಹೋದರ ರಂಜಿತ್ ಕೂಡ ಹಲವು ವರ್ಷಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡು ಈಗ ಮನೆಯಲ್ಲೇ ಮಲಗಿದ ಸ್ಥಿತಿಯಲ್ಲಿ ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಕ್ಷಿತ್ ಅವರ ಅಕಾಲಿಕ ನಿಧನದಿಂದ ಬಡ ಕುಟುಂಬದ ಆಸರೆ ಕಳೆದು ಹೋದಂತಾಗಿದೆ.

ಈ ಘಟನೆ ಕುಟುಂಬಸ್ಥರು ಹಾಗೂ ಸ್ಥಳೀಯರನ್ನು ದುಃಖದಲ್ಲಿ ಮುಳುಗಿಸಿದೆ.