ಡೈಲಿ ವಾರ್ತೆ: 06/ಆಗಸ್ಟ್/2024

ಮಾಣಿ : ಬಂಟರ ಸಂಘದ ವತಿಯಿಂದ ಆಟಿಡೊಂಜಿ ಕೂಟ

  ಬಂಟ್ವಾಳ : ಆಟಿ ತಿಂಗಳ ವಿಶೇಷ ಆಚರಣೆಯಿಂದ ಯುವ ಪೀಳಿಗೆಗೆ ತುಳುನಾಡಿನ ಪುರಾತನವಾದ ಸಂಸ್ಕಾರ ಸಂಸ್ಕೃತಿಯ ಅರಿವು ಮೂಡಿಸಲು ಸಾಧ್ಯವಿದೆ. ತುಳುನಾಡಿನ ಇತಿಹಾಸದ ಬಗ್ಗೆ ಮುಂದಿನ ಜನಾಂಗಕ್ಕೆ ತಿಳಿಯ ಪಡಿಸುವ ಅಗತ್ಯವಿದೆ ಎಂದು ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ರಂಗೋಲಿ ಹೇಳಿದರು. 

    ಮಾಣಿ ವಲಯ ಬಂಟರ ಸಂಘದ ಆಶ್ರಯದಲ್ಲಿ ಮಾಣಿಯ ಬಾಲವಿಕಾಸ ಆಡಿಟೋರಿಯಂನಲ್ಲಿ ಜರುಗಿದ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ  ಮಾತನಾಡಿದರು. 

   ಮಾಣಿ ವಲಯ ಬಂಟರ ಸಂಘ ಕಳೆದ ಹಲವು ವರ್ಷಗಳಿಂದ ಆಟಿಡೊಂಜಿ ಕೂಟ, ಕ್ರೀಡಾ ಕೂಟದಂತಹ ಕೆಲವೊಂದು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದು ನಿಜಕ್ಕೂ ಶ್ಲಾಘನೀಯ. ಬಂಟ್ವಾಳ ತಾಲೂಕು ಬಂಟರ ಸಂಘಕ್ಕೆ ಮಾಣಿ ವಲಯ ಬಂಟರ ಸಂಘದ ಕೊಡುಗೆ ಅಪಾರವಾದುದು ಎಂದರು.

    ಸಾಹಿತಿ ಡಾ.ಮಾಲತಿ ಶೆಟ್ಟಿ ಮಾಣೂರು ಮಾತನಾಡಿ, ಆಟಿ ತಿಂಗಳ ವೈಶಿಷ್ಟ್ಯತೆ, ಸಮಾಜ ಬಾಂಧವರ ಒಗ್ಗೂಡಿಸುವಿಕೆಯ ಅಗತ್ಯತೆ ಮತ್ತು ಮಕ್ಕಳಿಗೆ  ಕಲಿಸಬೇಕಾದ ಜೀವನ ಪದ್ಧತಿಯ ಬಗ್ಗೆ ತಿಳಿಯಪಡಿಸಿದರು. 

 ಸಂಘದ ಗೌರವಾಧ್ಯಕ್ಷೆ ಪ್ರಫುಲ್ಲ. ಆರ್. ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಮಾಧವ ರೈ ಅಮೈ ಭಂಡಸಾಲೆ  ಅಧ್ಯಕ್ಷತೆ ವಹಿಸಿದ್ದರು. 

    ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಪ್ರಹ್ಲಾದ ಶೆಟ್ಟಿ ಜಡ್ತಿಲ, ಬಂಟ್ವಾಳ ತಾಲೂಕು ಬಂಟರ ಸಂಘದ ಸ್ಥಾಪಕಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ ಅತಿಥಿಗಳಾಗಿ ಭಾಗವಹಿಸಿದ್ದರು. 

   ಇಂದೇ ವೇಳೆ ನಿವೃತ್ತ ಉಪನ್ಯಾಸಕಿ ಪ್ರೇಮಲತಾ. ಜೆ.ರೈ, ಪ್ರಾಧ್ಯಾಪಕ ತಾರನಾಥ ಶೆಟ್ಟಿ ಹಿರ್ತಂದಬೈಲು, ಯುವ ಚಲನ ಚಿತ್ರ ನಟಿ ಕು. ವೆನ್ಯ ರೈ, ಶೈಕ್ಷಣಿಕ ಸಾಧಕಿ ಕು. ದೀಕ್ಷಾ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಲಯದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.  ಸಮಾಜದ ಮಹಿಳೆಯರು ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಮಾಜ ಬಾಂಧವರಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಆಟಿ ತಿಂಗಳ ವಿಶಿಷ್ಟ ಖಾದ್ಯಗಳೊಂದಿಗೆ ಭೋಜನ ನಡೆಯಿತು. ವಿಶೇಷ ಖಾದ್ಯಗಳನ್ನು ತಯಾರಿಸಿದ ಸಮಾಜದ ಮಹಿಳೆಯರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

    ಸಂಘದ ನಿಕಟ ಪೂರ್ವಾಧ್ಯಕ್ಷ ಗಂಗಾಧರ ರೈ ವಡ್ಯದಗಯ, ಗೌರವ ಸಲಹೆಗಾರರಾದ ಬಾಲಕೃಷ್ಣ ಆಳ್ವ ಕೊಡಾಜೆ, ಬಾಲಕೃಷ್ಣ ಶೆಟ್ಟಿ ಪಾಂಡಿಬೆಟ್ಟು, ಪೂರ್ವಾಧ್ಯಕ್ಷರಾದ ಉಮಾನಾಥ ಶೆಟ್ಟಿ ಪೆರ್ನೆ, ಪ್ರವೀಣ್ ರೈ ಕಲ್ಲಾಜೆ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

      ಸಂಘದ ಉಪಾಧ್ಯಕ್ಷ ಗಂಗಾಧರ ಆಳ್ವ ಅನಂತಾಡಿ ಸ್ವಾಗತಿಸಿ, ಕಾರ್ಯದರ್ಶಿ ನಿರಂಜನ ರೈ ಕುರ್ಲೆತ್ತಿಮಾರು ವಂದಿಸಿದರು.  ವಿಜಯಲಕ್ಷ್ಮಿ.ವಿ.ಶೆಟ್ಟಿ, ವಿಂಧ್ಯಾ. ಎಸ್. ರೈ, ಮಲ್ಲಿಕಾ.ಎ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.