

ಡೈಲಿವಾರ್ತೆ:21ಮಾರ್ಚ್/2026


ಬಂಟ್ವಾಳ: ಪೆಟ್ರೋಲ್ ಪಂಪ್‌ನಲ್ಲಿ ಮದ್ಯಪಾನಿಯ ಅಟ್ಟಹಾಸ; ಪೊಲೀಸರ ಎದುರೇ ಹೈಡ್ರಾಮಾ ನಡೆಸಿದ ಯುವಕನ ಬಂಧನ

ಬಂಟ್ವಾಳ: ಕುಡಿದ ಅಮಲಿನಲ್ಲಿ ಪೆಟ್ರೋಲ್ ಪಂಪ್‌ಗೆ ನುಗ್ಗಿದ ಯುವಕನೊಬ್ಬ ಸಿಬಂದಿ ಮೇಲೆ ಹಲ್ಲೆ ನಡೆಸಿ, ಪಂಪ್‌ನ ಉಪಕರಣಗಳನ್ನು ಧ್ವಂಸಗೊಳಿಸಿ ಸಾರ್ವಜನಿಕವಾಗಿ ರಂಪಾಟ ನಡೆಸಿದ ಘಟನೆ ಮೆಲ್ಕಾರ್‌ನ ಗುಡ್ಡೆಯಂಗಡಿಯಲ್ಲಿ ವರದಿಯಾಗಿದೆ.
ಪೊಲೀಸರ ಎದುರಲ್ಲೇ ಆವಾಜ್ ಹಾಕುತ್ತಾ ಹೈಡ್ರಾಮಾ ಸೃಷ್ಟಿಸಿದ ಈತನನ್ನು ಸಜಪಮೂಡ ಕಾರಾಜೆಯ ಅಫ್ರೀದ್ (28) ಎಂದು ಗುರುತಿಸಲಾಗಿದ್ದು, ಸದ್ಯ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಮಾರ್ಚ್ 20ರ ಸಂಜೆ ವೇಳೆ ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಅಫ್ರೀದ್, ಪಾನಮತ್ತನಾಗಿ ಮೆಲ್ಕಾರ್‌ನ ಪೆಟ್ರೋಲ್ ಪಂಪ್‌ಗೆ ನಡೆದುಕೊಂಡು ಬಂದಿದ್ದಾನೆ. ಗ್ಯಾಸ್ ಭರ್ತಿ ಮಾಡುತ್ತಿದ್ದ ಸಿಬಂದಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ವಾಗ್ವಾದಕ್ಕಿಳಿದ ಆರೋಪಿ, ಏಕಾಏಕಿ ಸಿಬಂದಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಪಂಪ್‌ನ ಗ್ಯಾಸ್ ಪೈಪ್‌ಗಳನ್ನು ಎಳೆದಾಡಿ, ಕಾಲಿನಿಂದ ತುಳಿದು ಅಲ್ಲಿದ್ದ ಉಪಕರಣಗಳಿಗೆ ಹಾನಿ ಮಾಡಿದ್ದಾನೆ.
ಸ್ಥಳದಲ್ಲಿ ಗಲಾಟೆ ನಡೆಯುತ್ತಿದ್ದಂತೆ ಬೀಟ್ ಪೊಲೀಸ್ ಸಿಬಂದಿಯೊಬ್ಬರು ಪರಿಸ್ಥಿತಿ ನಿಯಂತ್ರಿಸಲು ಮುಂದಾಗಿದ್ದಾರೆ. ಆದರೆ, ಆರೋಪಿ ಅಫ್ರೀದ್ ತನ್ನ ಉದ್ಧಟತನವನ್ನು ಮುಂದುವರಿಸಿ, ಸಾರ್ವಜನಿಕರ ಸಮ್ಮುಖದಲ್ಲೇ ಪೊಲೀಸರಿಗೂ ಅವಾಚ್ಯ ಪದಗಳಿಂದ ನಿಂದಿಸಿ ಆವಾಜ್ ಹಾಕಿದ್ದಾನೆ. ಠಾಣೆಯಿಂದ ಪೊಲೀಸ್ ಜೀಪ್ ಬರುತ್ತಿದ್ದಂತೆ, ಪೊಲೀಸರು ಆತನನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಜೀಪಿಗೆ ತಳ್ಳಿ ಠಾಣೆಗೆ ಕರೆದೊಯ್ದಿದ್ದಾರೆ.
ಈ ಕುರಿತು ಪೆಟ್ರೋಲ್ ಪಂಪ್ ಮ್ಯಾನೇಜರ್ ಕುನಾಲ್ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ