ಡೈಲಿ ವಾರ್ತೆ: 06/ಆಗಸ್ಟ್/2024
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಕ್ಲಸ್ಟರ್ ನಾ ಬಿಜ್ಜೂರ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ.
ಮಕ್ಕಳ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜ-ನಾಣಕಿ ನಾಯಕ
ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅರಳಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದ್ದು, ಮಕ್ಕಳು ಕೂಡ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ನಾಣಕಿ ನಾಯಕ ಅವರು ಹೇಳಿದರು.
ಬಿಜ್ಜೂರ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕ ಶಿಕ್ಷ ಣ ಇಲಾಖೆಯಿಂದ ಇಂದು ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರ ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ, ಮಕ್ಕಳ ಮೇಳ, ಕ್ರಿಡಾ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇಲ್ಲಿ ಮಕ್ಕಳು ತಮ್ಮಲ್ಲಿರುವ ಕಲೆ, ಸಾಹಿತ್ಯ, ಜಾನಪದ ಪ್ರಾಕಾರದ ಪ್ರತಿಭೆಯನ್ನು ತೋರಿ ಸಾಂಸ್ಕೃತಿಕವಾಗಿ ಮುಂದೆ ಬರಬೇಕು ಎಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಿ ಎಮ್ ಯರಗುಪ್ಪಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಸಾಂಸ್ಕೃತಿಕ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಅನಾವರಣ ಮಾಡುವ ಮೂಲಕ ಮಕ್ಕಳು ಸರ್ವಾಂಗೀಣ ಬೆಳವಣಿಗೆ ಸಾಧಿಸಲು ಅವಕಾಶ ಕಲ್ಪಿಸಬೇಕು.ಇಲ್ಲಿ ಎರಡು ಹಂತಗಳಲ್ಲಿ ಅಂದರೆ 1 ರಿಂದ 4 ಹಾಗೂ 5 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ವಿಭಾಗದಲ್ಲಿ ಕಂಠಪಾಠ, ದೇಶಭಕ್ತಿ ಗೀತೆ,ಚಿತ್ರಕಲೆ, ಛದ್ಮವೇಷ,ಧಾರ್ಮಿಕ ಪಠಣ, ಅಭಿನಯಗೀತೆ, ಕ್ಲೇ ಮಾಡೆಲಿಂಗ್ ಮತ್ತು ಆಶುಭಾಷಣ ಹಾಗೂ ಇನ್ನೂ ಮುಂತಾದ ಸ್ಪರ್ಧೆಗಳಲ್ಲಿ ಸೋಲು, ಗೆಲುವಿನ ಬಗ್ಗೆ ಯೋಚಿಸದೆ ಸ್ಪರ್ಧೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಬಿ ಆರ್ ಪಿ ಈಶ್ವರ ಮೆಡ್ಲೇರಿ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್ ಎಫ್ ಮಠದ ಮಾತನಾಡಿ, ಪ್ರತಿಭಾ ಕಾರಂಜಿ ಎಂಬುದು ಕಲಾ ಪ್ರತಿಭೆಗಳ ಚಿಣ್ಣರ ಹಬ್ಬ, ಪೋಷಕರಿಗಲ್ಲದೆ ಸಾರ್ವಜನಿಕರು ಖುಷಿ ಪಡುವ ಹಬ್ಬ. ಮಕ್ಕಳ ಪ್ರತಿಭೆಯನ್ನು ತಂದೆ ತಾಯಿಗಳು ಹತ್ತಿರದಿಂದ ಕಣ್ಮುಂಬಿಕೊಳ್ಳುವ ವೇದಿಕೆಯಾಗಿದೆ. ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದವರೆಗೆ ಸ್ಪರ್ಧೆ ಇರುವುದರಿಂದ ಶಾಲೆ ಶಿಕ್ಷಕರು ಉತ್ತಮ ತರಬೇತಿ ನೀಡಿ ಸಜ್ಜುಗೊಳಿಸಬೇಕು. ಸರ್ಕಾರ ಉಚಿತ ಸೈಕಲ್ ಸೇರಿದಂತೆ ಆನೇಕ ಯೋಜನೆಗಳನ್ನು ಜಾರಿ ಮಾಡಿ ಗುಣಮಟ್ಟದ ಶಿಕ್ಷಣಕ್ಕೆ ಪ್ರಯತ್ನಿಸುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಬಿ ಇ ಓ ಎಚ್ ನಾಣಕಿ ನಾಯಕ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಹನುಮಂತಪ್ಪ ಗಡೇದ, ಶಿರಹಟ್ಟಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್ ಎಫ್ ಮಠದ, ಸಂಘದ ಪರಿಷತ್ ಸದಸ್ಯರಾದ ಗಿರೀಶ್ ಕೊಡಬಾಳ, ಭೂ ದಾನಿ ಗುರುಪಾದಯ್ಯ ಹಸವೀಮಠ, ಬಿ ಆರ್ ಪಿ ಯವರಾದ ಈಶ್ವರ ಮೆಡ್ಲೇರಿ, ಬಸವರಾಜ ಯರಗುಪ್ಪಿ, ವಾಸು ದೀಪಾಳಿ, ಮಲ್ಲಿಕಾರ್ಜುನ ರೆಡ್ಡಿ,ಮತ್ತು ಬೆಳ್ಳಟ್ಟಿ ಸಿ ಆರ್ ಪಿ ಮಿತ್ರರಾದ ಆರ್ ಮಹಾಂತೇಶ, ಕೊಗನೂರಿನ ಸತೀಶ್ ಪಶುಪತಿಹಾಳ, ಬನ್ನಿಕೊಪ್ಪದ ಚಂದ್ರಶೇಖರ್ ವಡಕಣ್ಣವರ, ಹೆಬ್ಬಾಳದ ತಿರಕಪ್ಪ ಪೂಜಾರ, ಸೂರಣಗಿಯ ಲೋಕೇಶ್ ಮಠದ, ಆರ್ ಎಮ್ ಯಣಿಗಾರ, ಮಂಜುನಾಥ್ ಹಿರೇಮಠ, ಶರಣಪ್ಪ ಯಲಿಗಾರ ಶಾಲೆಯ ಪ್ರಧಾನ ಗುರುಗಳಾದ ಜಿ ಎಲ್ ಮಂಟಗಣಿ ಸ್ವಾಗತಿಸಿದರು, ಎಮ್ ಜಿ ಹುಡೇದ ವಂದಿಸಿದರು, ಸಿ ಬಿ ಬೂದಿಹಾಳ ಮತ್ತು ಬಿ ಜಿ ಅಂಗಡಿ ನಿರೂಪಿಸಿದರು.