ಡೈಲಿ ವಾರ್ತೆ: 12/ಆಗಸ್ಟ್/2024

ಶಿಕ್ಷಕರ ಪ್ರತಿಭಟನೆ: ಬಡ್ತಿ, ವರ್ಗಾವಣೆ, ಸೇವಾ ಜ್ಯೇಷ್ಠತೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಲು ಆಗ್ರಹ

ಬೆಂಗಳೂರು: ಬಡ್ತಿ, ವರ್ಗಾವಣೆ ಹಾಗೂ ಸೇವಾ ಜ್ಯೇಷ್ಠತೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಲಾಗಿದೆ. ಹೋರಾಟದಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಸಾವಿರಾರು ಶಿಕ್ಷಕರು ಭಾಗಿಯಾಗಿದ್ದರು.

2017ರ ನಂತರ ನೇಮಕ ಆದ ಶಿಕ್ಷಕರನ್ನು 1 ರಿಂದ 7ಕ್ಕೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಬೇಕು. ಅರ್ಹತೆ ಆಧಾರದ ಮೇಲೆ ಶಿಕ್ಷಕರ ಮುಂಬಡ್ತಿ ನೀಡುವುದು, ಎಲ್ಲ ಶಿಕ್ಷಕರನ್ನು ಮುಖ್ಯ ಗುರುಗಳ ಹುದ್ದೆಗೆ ಸೇವಾ ಜ್ಯೇಷ್ಠತೆ ಆಧಾರದ ಮುಂಬಡ್ತಿ ನೀಡಬೇಕು ಎಂದು ಶಿಕ್ಷಕರು ಒತ್ತಾಯಿಸಿದ್ದಾರೆ.

1ರಿಂದ 5ನೇ ತರಗತಿವರೆಗೆ ಪಾಠ ಮಾಡುವ ಶಿಕ್ಷಕರು ಪದವೀಧರರಾಗಿದ್ದಲ್ಲಿ, ಅವರನ್ನು 6ರಿಂದ 8ನೇ ತರಗತಿವರೆಗೆ ಪಾಠ ಮಾಡುವ ಜಿಪಿಟಿ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಬೇಕು. ಈ ಬಡ್ತಿಗೆ ಅಡ್ಡಿಯಾಗಿರುವ ವೃಂದ ನೇಮಕಾತಿ ನಿಯಮ-2017ಕ್ಕೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಈ ಹೋರಾಟಕ್ಕೆ ಸರ್ಕಾರ ಸ್ಪಂದಿಸದೆ ಇದ್ದಲ್ಲಿ ಪ್ರತಿಭಟನೆ ಮುಂದಿನ ಹಂತಕ್ಕೆ ಹೋಗಲಿದೆ. ಬೋಧನೆ ಹಾಗೂ ಇತರೆ ಚಟುವಟಿಕೆ ಬಂದ್ ಮಾಡುವುದಾಗಿ ಸರ್ಕಾರಕ್ಕೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ, ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ನಾಗೇಶ್‌, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಸೇರಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಶಿಕ್ಷಕರು ಇದ್ದರು.

ಶಿಕ್ಷಕರ ಹಕ್ಕೋತ್ತಾಯಗಳು:

  1. 2017 ರವರೆಗೆ ನೇಮಕವಾದ ಶಿಕ್ಷಕರನ್ನು 1 ರಿಂದ 7ಕ್ಕೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಿ, ಉಲ್ಲೇಖ (1)ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳು, 2017ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು ಹಾಗೂ ಯಾವುದೇ ಕಾರಣಕ್ಕೂ 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸಬಾರದು ಹಾಗೂ ಪದವಿ ಪೂರೈಸಿದ ಎಲ್ಲರಿಗೂ ಸೇವಾ ಜ್ಯೇಷ್ಠತೆಯೊಂದಿಗೆ “ಪದವೀಧರ ಶಿಕ್ಷಕರೆಂದು” ಪದನಾಮೀಕರಿಸುವುದು.
  2. ಉಲ್ಲೇಖ (1)ರ 2017 ರ ವೃಂದ ಮತ್ತು ನೇಮಕಾತಿ ನಿಯಮಗಳು 2016 ಕ್ಕಿಂತ ಮುಂಚೆ ನೇಮಕಾತಿ ಹೊಂದಿದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎಂದು ಕಾರ್ಯಾದೇಶ ಹೊರಡಿಸಿ, ಮೂಲತ: 1-7,8ನೇ ತರಗತಿಗೆ ನೇಮಕ ಹೊಂದಿದವರನ್ನು ಪಿಎಸ್‌ಟಿ ಎಂದು ಪದನಾಮ ಮಾಡಿ 1-5 ಕ್ಕೆ ಸೀಮಿತಗೊಳಿಸಿರುವುದನ್ನು ಹಿಂಪಡೆಯಬೇಕು.
  3. ಅರ್ಹ ವಿದ್ಯಾರ್ಹತೆ ಪೂರೈಸಿದ 2016ಕ್ಕಿಂತ ಮೊದಲು ನೇಮಕಾತಿಯಾದ ಎಲ್ಲಾ 1 ರಿಂದ 8ನೇ ತರಗತಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಖ್ಯೆ ಮುಗಿಯುವವರೆಗೂ ಈ ಮೊದಲಿನಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು.
  4. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಪೂರ್ವದಂತೆ ಮುಖ್ಯ ಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜ್ಯೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಬೇಕು.