ಡೈಲಿ ವಾರ್ತೆ: 13/ಆಗಸ್ಟ್/2024

ಮೂಡಬಿದ್ರಿ: ಯುವಕನೊಬ್ಬ ಕಾಲೇಜು ತರಗತಿಗೆ ನುಗ್ಗಿ ವಿದ್ಯಾರ್ಥಿನಿಗೆ ಕತ್ತರಿಯಿಂದ ಇರಿದು ಕೊಲೆಗೆ ಯತ್ನ, ಆರೋಪಿ ಬಂಧನ!

ದಕ್ಷಿಣ ಕನ್ನಡ: ತನ್ನ ಮೆಸೇಜಿಗೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಕೋಪಗೊಂಡ ಯುವಕನೊಬ್ಬ ಕಾಲೇಜು ತರಗತಿಗೆ ನುಗ್ಗಿ ವಿದ್ಯಾರ್ಥಿನಿಗೆ ಕತ್ತರಿಯಿಂದ ಇರಿದ ಘಟನೆ ಮೂಡುಬಿದ್ರೆಯಲ್ಲಿ ನಡೆದಿದೆ.

ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಘಟನೆ ನಡೆದಿದ್ದು ಆರೋಪಿ ತುಮಕೂರು ಮೂಲದ ಮಂಜುನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ್ ಈ ಹಿಂದೆ ಇದೇ ಕಾಲೇಜಿನಲ್ಲಿ ಓದುತ್ತಿದ್ದು ಆನಂತರ ಕಾಲೇಜು ಬಿಟ್ಟು ಊರಿಗೆ ಹೋಗಿದ್ದ. ತುಮಕೂರು ಮೂಲದ ಆತನಿಗೆ ಪರಿಚಯದ ಮತ್ತು ಆಳ್ವಾಸ್ ನಲ್ಲಿ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಗೆ ತರಗತಿ ಒಳಗಡೆ ಬಂದು ಕತ್ತರಿಯಿಂದ ಕುತ್ತಿಗೆ ಭಾಗಕ್ಕೆ ಇರಿದಿದ್ದಾನೆ. ಕೂಡಲೇ ಇತರ ವಿದ್ಯಾರ್ಥಿಗಳು ಆತನನ್ನು ಹಿಡಿದಿದ್ದು ಮೂಡುಬಿದ್ರೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಮಾಹಿತಿ ಪ್ರಕಾರ, ತನ್ನ ಮೆಸೇಜ್ ಗೆ ಉತ್ತರಿಸುತ್ತಿಲ್ಲ ಎಂದು ಕೋಪಗೊಂಡಿದ್ದ ಯುವಕ ತುಮಕೂರಿನಿಂದ ಮೂಡಬಿದಿರೆಗೆ ಬಂದಿದ್ದು ಯುವತಿಯ ಭೇಟಿಗೆ ಯತ್ನಿಸಿದ್ದಾನೆ. ಬಳಿಕ ಭೇಟಿಗೆ ಸಿಕ್ಕಿಲ್ಲ ಎಂಬ ಕೋಪದಲ್ಲಿ ಆಕೆಯ ತರಗತಿಗೆ ತೆರಳಿ ಕತ್ತರಿಯಿಂದ ಇರಿಯಲು ಯತ್ನಿಸಿದ್ದಾನೆ.

ಘಟನೆಯಲ್ಲಿ ಯುವತಿ ಮುಖ ಮತ್ತು ಕುತ್ತಿಗೆಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದು ಮೂಡುಬಿದ್ರೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.