ಡೈಲಿ ವಾರ್ತೆ: 16/ಆಗಸ್ಟ್/2024

‘ಕಾಂತಾರ’ ಅತ್ಯುತ್ತಮ ನಟ
ರಿಷಬ್ ಶೆಟ್ಟಿ ಮುಡಿಗೇರಿದ ರಾಷ್ಟ್ರಪ್ರಶಸ್ತಿ

ರಿಷಬ್ ಶೆಟ್ಟಿ ಅವರ ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪ್ರಾಪ್ತಿಯಾಗಿದೆ. ‘ಕಾಂತಾರ’ ಸಿನಿಮಾದ ಅತ್ಯುತ್ತಮ ನಟನೆಯನ್ನು ಪರಿಗಣಿಸಿ ಅವರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಕನ್ನಡ ಸಿನಿಮಾ ನಟರೊಬ್ಬರಿಗೆ ರಾಷ್ಟ್ರಪ್ರಶಸ್ತಿ ದೊರೆತು ದಶಕಗಳೇ ಆಗಿಬಿಟ್ಟಿದ್ದವು. ಆ ಬರವನ್ನು ಈಗ ನೀಗಿದ್ದು, ನಟ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ದೊರೆತಿದೆ. ‘ಕಾಂತಾರ’ ಸಿನಿಮಾದ ಅತ್ಯುತ್ತಮ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ದೊರೆತಿದೆ. ಈ ವರ್ಷ ರಿಷಬ್ ಶೆಟ್ಟಿಗೆ ಮಲಯಾಳಂ ನಟ ಮಮ್ಮುಟಿ, ಹಿಂದಿಯ ವಿಕ್ರಾಂತ್ ಮೆಸ್ಸಿ ಇನ್ನೂ ಹಲವು ನಟರಿಂದ ಸ್ಪರ್ಧೆ ಇತ್ತು. ಆದರೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಒಲಿದಿದೆ. ಕನ್ನಡ ಸಿನಿಮಾಕ್ಕೆ, ಕರ್ನಾಟಕದ್ದೇ ನಟನಿಗೆ ಒಲಿಯುತ್ತಿರುವ ಮೊದಲ ರಾಷ್ಟ್ರಪ್ರಶಸ್ತಿ ಇದು ಎನ್ನಲಾಗುತ್ತಿದೆ.

ದಶಕಗಳ ಹಿಂದೆ ನಟ ಕಮಲ್ ಹಾಸನ್ ಸಹೋದರ ಚಾರುಹಾಸನ್ ಅವರಿಗೆ ಕನ್ನಡದ ‘ತಬರನ ಕತೆ’ ಸಿನಿಮಾದ ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ದೊರೆತಿತ್ತು. ಅದಾದ ಬಳಿಕ ‘ನಾನು ಅವನಲ್ಲ ಅವಳು’ ಸಿನಿಮಾದ ಅತ್ಯುತ್ತಮ ನಟನೆಗೆ ಸಂಚಾರಿ ವಿಜಯ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿತ್ತು. ಅದಾದ ಬಳಿಕ ಇನ್ಯಾವುದೇ ಕನ್ನಡದ ನಟರಿಗೆ ರಾಷ್ಟ್ರಪ್ರಶಸ್ತಿ ದೊರೆತಿರಲಿಲ್ಲ. ಇದೀಗ ಆ ಬಹು ಸಮಯದ ಬರವನ್ನು ರಿಷಬ್ ಶೆಟ್ಟಿ ನೀಗಿಸಿದ್ದಾರೆ. ಅಂದಹಾಗೆ ನಟಿ ತಾರಾ ಅವರಿಗೆ ರಾಷ್ಟ್ರಪ್ರಶಸ್ತಿ ದೊರೆತಿದ್ದನ್ನು ಇಲ್ಲಿ ಸ್ಮರಿಸಬಹುದು.

ರಿಷಬ್ ಶೆಟ್ಟಿ ‘ಕಾಂತಾರ’ ಸಿನಿಮಾವನ್ನು ನಿರ್ದೇಶನ ಮಾಡಿ ನಟನೆಯನ್ನೂ ಮಾಡಿದ್ದರು. ಆ ಸಿನಿಮಾದಲ್ಲಿ ಬೇಜವಾಬ್ದಾರಿಯುತ, ಸಿಡುಕು ಸ್ವಭಾವದ, ತಮಾಷೆ ಸ್ವಭಾವದ ಕಾಡುಬೆಟ್ಟು ಶಿವನ ಪಾತ್ರದಲ್ಲಿ ನಟಿಸಿದ್ದಾರೆ. ಅದೇ ಸಿನಿಮಾದಲ್ಲಿ ದೈವದ ವೇಷಧಾರಿಯಾಗಿ ಅಂತಿಮ ದೃಶ್ಯಗಳಲ್ಲಿ ಗುಳಿಗ ಮೈಮೇಲೆ ಬಂದಾಗಿನ ಅವರ ಅದ್ಭುತ ನಟನೆ ಇವೆಲ್ಲವನ್ನೂ ಪರಿಗಣಿಸಿ ರಿಷಬ್ ಶೆಟ್ಟಿ ಅವರಿಗೆ ಪ್ರಶಸ್ತಿ ನೀಡಲಾಗದೆ. ಕಳೆದ ವರ್ಷ ರಾಷ್ಟ್ರಪ್ರಶಸ್ತಿಯಲ್ಲಿ ಪುಷ್ಪ ಸಿನಿಮಾದ ಅತ್ಯುತ್ತಮ ನಟನೆಗಾಗಿ ಅಲ್ಲು ಅರ್ಜುನ್ ಅವರಿಗೆ ನೀಡಲಾಗಿತ್ತು. ಈ ಬಾರಿ ರಿಷಬ್ ಶೆಟ್ಟಿ ಪಾಲಾಗಿದೆ.