ಡೈಲಿ ವಾರ್ತೆ: 18/ಆಗಸ್ಟ್/2024

14 ವರ್ಷಗಳ ಹಿಂದೆ ಜೈಲಿನಿಂದ ತಪ್ಪಿಸಿಕೊಂಡಿದ್ದ ಖೈದಿ ಯನ್ನು ಮತ್ತೆ ಬಂಧಿಸಿ ಜೈಲಿಗಟ್ಟಿದ ಖಾಕಿ

ಕೊಪ್ಪಳ: ಗಂಗಾವತಿ ನಗರ ಪೊಲೀಸ್ ಠಾಣಾ
ವ್ಯಾಪ್ತಿಯ ಪ್ರಕರಣವೊಂದರಲ್ಲಿ ಕೊಪ್ಪಳ ಜಿಲ್ಲಾ ಕಾರಾಗೃಹದ ಬಂಧಿಯಾಗಿ 2010 ರಲ್ಲಿ ಜೈಲಿನಿಂದ ತಪ್ಪಿಸಿಕೊಂಡಿದ್ದ ಇಲಕಲ್ ಮೂಲದ ನಿವಾಸಿ ಮಾರ್ಕಂಡಯ್ಯ ತಿಮ್ಮಣ್ಣ ಪಲಮಾರಿ ಎಂಬ ಖೈದಿಯನ್ನು ಜಿಲ್ಲಾ ಪೊಲೀಸರು ಬರೊಬ್ಬರಿ 14 ವರ್ಷಗಳ ಬಳಿಕ ಬಂಧಿಸಿ ಮತ್ತೆ ಜೈಲಿಗಟ್ಟಿದ್ದಾರೆ.

ವಿಚಾರಣಾ ಖೈದಿ ಮಾರ್ಕಂಡಯ್ಯ ತಿಮ್ಮಣ್ಣ ಪಲಮಾರಿ ಇಲಕಲ್ ನಿವಾಸಿಯಾಗಿದ್ದ. ಗಂಗಾವತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತನ ವಿರುದ್ದ 2009ರಲ್ಲಿ ಕೇಸ್ ದಾಖಲಾಗಿತ್ತು. ಈತನನ್ನು ಕೊಪ್ಪಳ ಜಿಲ್ಲಾ ಕಾರಾಗೃಹದ ಬಂಧಿಯಾಗಿದ್ದನು. ಈತನ ವಿರುದ್ದ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿತ್ತು. ಆದರೆ ಈ ಖೈದಿ 2010ರ ಮೇ.04 ರಂದು ಜೈಲಿನಿಂದ ತಪ್ಪಿಸಿಕೊಂಡು ಎಲ್ಲೋ ತಲೆಮರೆಸಿಕೊಂಡಿದ್ದ.

ಈ ಪ್ರಕರಣದ ಸಂಬಂಧ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ 2010ರಲ್ಲಿ ತಲೆಮರೆಸಿಕೊಂಡ ಕುರಿತಂತೆ ಮತ್ತೊಂದು ಪ್ರಕರಣವೂ ದಾಖಲಾಗಿತ್ತು. ಈ ಖೈದಿಯ ಪತ್ತೆಗೆ ಜಾಲ ಬೀಸಿದ್ದ ಪೊಲೀಸ್ ಪಡೆಯು ಬರೊಬ್ಬರಿ 14 ವರ್ಷಗಳ ಬಳಿಕ ಕೈದಿ ಮಾರ್ಕಂಡಯ್ಯ ಬಂಧಿಸಿದೆ.
ಮಾರ್ಕಂಡಯ್ಯ ಪಲಮಾರಿ ತಲೆಮರೆಸಿಕೊಂಡ ಬಳಿಕ ತನ್ನ ಆಧಾರ್ ಕಾರ್ಡ್‌ನಲ್ಲಿ ಹೆಸರನ್ನು ಪಲ್ವಾರಿ ವೀರೇಶಂ ಎಂದು ಬದಸಿಕೊಂಡಿದ್ದಲ್ಲದೇ ತೆಲಂಗಾಣ ರಾಜ್ಯದ ಬುಡಾನ ಪೊಂಚಂಪಲ್ಲಿ ಮಂಡದ ಭುವನರುಶಿಪೇಟಾದಲ್ಲಿ ವಾಸವಾಗಿದ್ದ. ಈತನ ಪತ್ತೆಗೆ ನಾಪತ್ತೆಯಾದಾಗಿಂದಲೂ ತಂಡ ರಚನೆ ಮಾಡಲಾಗಿತ್ತು. ಈಚೆಗೆ ಎಸ್ಪಿ, ಹೆಚ್ಚುವರಿ ಎಸ್ಪಿ ಹೇಮಂತಕುಮಾರ, ಡಿಎಸ್‌ಪಿ ಸಿದ್ದಲಿಂಗಪ್ಪ ಗೌಡ ಮಾರ್ಗದರ್ಶನಲ್ಲಿ ಪೊಲೀಸ್ ಅಧಿಕಾರಿಗಳು ಖೈದಿಯನ್ನು ಮತ್ತೆ ಬಂಧಿಸುವಲ್ಲಿ ಯಶಸ್ವಿಯಾಗಿ ಖೈದಿಯನ್ನು ಶನಿವಾರ ಮತ್ತೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಈ ಪ್ರಕರಣದಲ್ಲಿ ಖೈದಿಯನ್ನು ಬರೊಬ್ಬರಿ 14 ವರ್ಷಗಳ ಬಳಿಕ ಬಂಧಿಸಿದ್ದು ಗಮನಾರ್ಹ ಸಂಗತಿಯಾಗಿದೆ.