ಡೈಲಿ ವಾರ್ತೆ: 19/ಆಗಸ್ಟ್/2024

ಕುಂದಾಪುರ: ವಕ್ವಾಡಿಯಲ್ಲಿ ದುಷ್ಕರ್ಮಿಗಳಿಂದ ತಲ್ವಾರ್ ದಾಳಿ – ಇಬ್ಬರು ಗಂಭೀರ ಗಾಯ, ಆರೋಪಿಗಳಿಬ್ಬರು ವಶಕ್ಕೆ

ಕುಂದಾಪುರ: ಗಾಂಜಾ ನಶೆಯಲ್ಲಿದ್ದ ಹತ್ತು ಜನರ ತಂಡವೊಂದು ತಲ್ವಾರ್ ಬೀಸಿ ಇಬ್ಬರು ಗಂಭೀರ ಗಾಯಗೊಂಡು ಹಲವರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಆ. 18 ರಂದು ಭಾನುವಾರ ಸಂಜೆ ಕುಂದಾಪುರ ತಾಲೂಕಿನ ವಕ್ವಾಡಿಯಲ್ಲಿ ನಡೆದಿದೆ.

ದುಷ್ಕರ್ಮಿಗಳ ತಲ್ವಾರ್ ದಾಳಿಯಿಂದ ಗಂಭೀರ ಗಾಯಗೊಂಡವರು ವಕ್ವಾಡಿಯ ಚಂದ್ರಶೇಖರ್(27) ಹಾಗೂ ಅಶೋಕ್‌ ದೇವಾಡಿಗ (45) ಎಂದು ತಿಳಿದು ಬಂದಿದೆ. ಇವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿಗಳು ವಕ್ವಾಡಿಯ ಆದರ್ಶ, ಎಡ್ವರ್ಡ್ ಗಣೇಶ್, ಕುಂಭಾಶಿ ಗೋವರ್ಧನ್ ಹಾಗೂ ಇತರ ಎಂಟು ಜನರು ಎಂದು ಗುರುತಿಸಲಾಗಿದೆ. ಈ ಪೈಕಿ ಪೊಲೀಸರು ಆದರ್ಶ(33) ಹಾಗೂ ಗೋವರ್ಧನ್(32) ಎಂಬುವರನ್ನು ಬಂಧಿಸಿದ್ದಾರೆ. ಗಣೇಶ್ ಕುಂಭಾಶಿ (28) ಹಾಗೂ ಎಡ್ವರ್ಡ್(35) ಸೇರಿದಂತೆ ಇತರರು ತಲೆಮರೆಸಿಕೊಂಡಿದ್ದು ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಘಟನೆ ವಿವರ: ಭಾನುವಾರ ಸಂಜೆ ಆರೋಪಿಗಳಾದ ಆದರ್ಶ ಗೋವರ್ಧನ್ ಗಣೇಶ್ ಎಡ್ವರ್ಡ್ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಗಾಂಜಾ ನಶೆಯಲ್ಲಿದ್ದ ಯುವಕರ ತಂಡ ವಕ್ವಾಡಿಯಲ್ಲಿ ಮಹಿಳೆಯರನ್ನು ಅಡ್ಡಗಟ್ಟಿ ದಾಂಧಲೆ ನಡೆಸಿತ್ತು. ಬಳಿಕ ಅಲ್ಲಿಯೇ ನಿಲ್ಲಿಸಲಾಗಿದ್ದ ಆಟೋಗಳಿಗೆ ಮತ್ತು ಬೈಕ್‌ಗಳಿಗೆ ತಲ್ವಾರ್ ಬಿಸಿ ಹಾನಿ ಉಂಟು ಮಾಡಿದ್ದರು. ಅಷ್ಟೆ ಅಲ್ಲದೆ ದುಷ್ಕರ್ಮಿಗಳು ಪಕ್ಕದಲ್ಲಿದ್ದ ಅಶೋಕ್ ದೇವಾಡಿಗ ಹಾಗೂ ಚಂದ್ರಶೇಖ‌ರ್ ಸೇರಿದಂತೆ ಐದಾರು ಮಂದಿಯ ಮೇಲೆ ತಲ್ವಾರ್ ಬೀಸಿ ಕೊಲೆಗೆ ಯತ್ನಿಸಿದ್ದಾರೆ. ಆದರೆ ಅದರಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಚಂದ್ರಶೇಖ‌ರ್ ಮತ್ತು ಅಶೋಕ್‌ ಗಂಭೀರ ಗಾಯಗೊಂಡಿದ್ದಾರೆ. ಉಳಿದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಕುಂದಾಪುರ ತಾಲೂಕಿನ ವಕ್ವಾಡಿ, ಗೋಪಾಡಿ, ಕುಂಭಾಶಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ಗಾಂಜಾ ಮತ್ತು ಡ್ರಗ್ಸ್ ಚಟುವಟಿಕೆಗಳು ನಡೆಯುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿತ್ತು. ಈ ಬಗ್ಗೆ ಹಲವಾರು ಹಲ್ಲೆ, ಮಾರಣಾಂತಿಕ ದಾಳಿ, ಕೊಲೆ ಬೆದರಿಕೆ, ಅತ್ಯಾಚಾರಯತ್ನ ದಂತಹ ಕ್ರಿಮಿನಲ್‌ ಪ್ರಕರಣಗಳು ನಡೆದಿದೆ.
ಈ ಘಟನೆಯ ಬಗ್ಗೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಪ್ರತ್ಯಕ್ಷದರ್ಶಿಗಳು ಈ ಘಟನೆಯನ್ನು ಖಂಡಿಸಿದ್ದು ಪೊಲೀಸರು ತಪ್ಪಿತಸ್ಥರನ್ನು ಬಂಧಿಸಿ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಾಂಜಾ, ಡ್ರಗ್ಸ್ ಹಾಗೂ ಅನೈತಿಕ ಚಟುವಟಿಕೆಗಳನ್ನು ತಡೆಯಬೇಕು ಎಂದು ಆಗ್ರಹಿಸಿದ್ದಾರೆ.