ಡೈಲಿ ವಾರ್ತೆ: 19/ಆಗಸ್ಟ್/2024

ಶಿವಮೊಗ್ಗದಲ್ಲಿ ಝೀಕಾ ವೈರಸ್​ ಗೆ ವೃದ್ಧ ಬಲಿ – ರಾಜ್ಯದಲ್ಲಿ 9 ಮಂದಿಗೆ ಸೋಂಕು.!

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಝೀಕಾ ವೈರಸ್​ ಹಾವಳಿ ಹೆಚ್ಚುತ್ತಿದ್ದು, ಹೆಮ್ಮಾರಿ ವೈರಸ್ ಗೆ ಶಿವಮೊಗ್ಗದಲ್ಲಿ 73 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದು, ಇದರಿಂದ ಝೀಕಾ ದಾಳಿಗೆ ರಾಜ್ಯದಲ್ಲಿ ಮೊದಲ ವ್ಯಕ್ತಿ ಬಲಿಯಾಗಿದ್ಧಾರೆ.

ಈ ಆಗಸ್ಟ್‌ನಲ್ಲಿ ರಾಜ್ಯದಲ್ಲಿ ಒಟ್ಟು 9 ಝೀಕಾ ವೈರಸ್‌ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಪ್ರಕರಣಗಳಲ್ಲಿ 6 ಮಂದಿ ರಾಜಧಾನಿಯ ಜಿಗಣಿಯವರೇ ಇದ್ದು, ಮೂವರು ಶಿವಮೊಗ್ಗದವರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಕೂಡ ಸ್ಪಷ್ಟನೆ ಪಡಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಆರೋಗ್ಯಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಝೀಕಾ ಪ್ರಕರಣಗಳು ವರದಿಯಾಗುತ್ತಿವೆ. ಒಟ್ಟು 9 ಪ್ರಕರಣಗಳಲ್ಲಿ ಐವರು ಮಹಿಳೆಯರು, ಮೂವರು ಪುರುಷರು ಇದ್ದಾರೆ. ಶಿವಮೊಗ್ಗ ಝೀಕಾ ಸೋಂಕಿತ ವ್ಯಕ್ತಿಯು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಕಾರಣ ಮೃತಪಟ್ಟಿದ್ದಾರೆ. ಸೋಂಕು ಪತ್ತೆಯಾದ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದರು.

ಗರ್ಭಿಣಿಗೆ ಸೋಂಕು
ಝೀಕಾ ಸೋಂಕು ದೃಢಪಟ್ಟವರಲ್ಲಿ ಜಿಗಣಿಯ ಗರ್ಭಿಣಿಯೂ ಇದ್ದಾರೆ. ಈಗಾಗಲೇ ಅವರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದರು.