ಡೈಲಿ ವಾರ್ತೆ: 23/ಆಗಸ್ಟ್/2024

ಕುಂದಾಪುರ: ನಾವುಂದದಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದ ಬಟ್ಟೆ ಹಾಗೂ ಸ್ಟೇಶನರಿ ಅಂಗಡಿಗೆ ಬೆಂಕಿ – ಲಕ್ಷಾಂತರ ರೂ. ನಷ್ಟ

ನಾವುಂದ : ನಾವುಂದದ ಪಾಲ್ಮ್ ಗ್ರೋವ್ ಕಾಂಪ್ಲೆಕ್ಸ್ ನಲ್ಲಿದ್ದ ಶ್ರೀ ವಿನಾಯಕ ಟೈಲರ್, ಬಟ್ಟೆ ಹಾಗೂ ಸ್ಟೇಶನರಿ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದ ಸಂಪೂರ್ಣ ಸುಟ್ಟು ಹೋದ ಘಟನೆ ಅ.23ರಂದು ನಡೆದಿದೆ.

ಶ್ರೀಮತಿ ಪ್ರತಿಭಾ ವಿಜೇಂದ್ರ ಅರೆಹೊಳೆ ಎಂಬವರು ಟೈಲರಿಂಗ್ ಜೊತೆಯಲ್ಲಿ ಬಟ್ಟೆ ಹಾಗೂ ಸ್ಟೇಶನರಿಯೊಂದಿಗೆ ಅಂಗಡಿ ನಡೆಸಿಕೊಂಡಿದ್ದರು.
ಅಂಗಡಿಯಲ್ಲಿ ಹೊಲಿಗೆ ಯಂತ್ರ, ಫ್ರಿಡ್ಜ್, ಬಟ್ಟೆ, ಪುಸ್ತಕಗಳು, ಸ್ಟೇಶನರಿ ವಸ್ತುಗಳು, ಕಪಾಟು, ಫ್ಯಾನ್ಸಿ ಐಟಂಗಳು, ಸುಮಾರು 5000 ಹಣ ಹಾಗೂ ಬ್ಯಾಗಿನಲ್ಲಿದ್ದ ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಶನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಕೂಡ ಸುಟ್ಟು ಹೋಗಿದೆ.

ಅಂಗಡಿ ಮಾಲಕಿ ಪ್ರತಿಭಾ ವಿಜೇಂದ್ರ ಅವರು ಮಧ್ಯಾಹ್ನ 12.00ರವರೆಗೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು ನಂತರ ದೇವಸ್ಥಾನಕ್ಕೆ ತೆರಳಿದ್ದರು. ಸುಮಾರು 12.45ರ ಹೊತ್ತಿಗೆ ಹೊಗೆ ತುಂಬಿಕೊಂಡದ್ದನ್ನು ಆಸುಪಾಸಿನ ಅಂಗಡಿಯವರು ಹಾಗೂ ಸ್ಥಳಿಯರು ನೋಡಿ ಅಗ್ನಿಶಾಮಕ ಹಾಗೂ ಪೋಲೀಸರಿಗೆ ಫೋನ್ ಮಾಡಿದ್ದರು. ಅಗ್ನಿ ಶಾಮಕದವರು ಆಗಮಿಸಿ ಬೆಂಕಿ ನಂದಿಸುವ ಹೊತ್ತಿಗೆ ಸಂಪೂರ್ಣ ಸುಟ್ಟು ಹೋಗಿದ್ದು ಅಂದಾಜು 3 ಲಕ್ಷಕ್ಕೂ ಮಿಕ್ಕಿ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಬೈಂದೂರು ಪೋಲೀಸರು ಆಗಮಿಸಿ ಪರಿಶೀಲಿಸಿದ್ದಾರೆ.