ಡೈಲಿ ವಾರ್ತೆ: 25/ಆಗಸ್ಟ್/2024

ಕೋಟ: ರಸ್ತೆ ದಾಟುತ್ತಿದ್ದ ಪಾದಚಾರಿಗೆ ಕಾರು ಡಿಕ್ಕಿ – ಗಂಭೀರ ಗಾಯ

ಕೋಟ: ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಪಾದಚಾರಿ ಗಂಭೀರ ಗಾಯಗೊಂಡ ಘಟನೆ ಆ. 25 ರಂದು ಭಾನುವಾರ ಕೋಟ ಗೋ ಆಸ್ಪತ್ರೆ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.

ಗಂಭೀರ ಗಾಯಗೊಂಡ ಪಾದಚಾರಿ ವಿಜಯ (53) ಎಂದು ಗುರುತಿಸಲಾಗಿದೆ.
ಕುಂದಾಪುರದಿಂದ ಉಡುಪಿ ಕಡೆಗೆ ಚಲಿಸುತ್ತಿದ್ದ ಕಾರು ರಸ್ತೆಬದಿಯಿಂದ ಹೆದ್ದಾರಿ ದಾಟಲು ಬಂದ ಪಾದಚಾರಿಗೆ ನೇರ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪಾದಚಾರಿಯು ರಸ್ತೆಗೆ ಬಿದ್ದಿದ್ದು ತಲೆಗೆ ಗಂಭೀರ ಗಾಯವಾಗಿದೆ. ತಕ್ಷಣ ಕೋಟ ಜೀವನ ಮಿತ್ರ ಆಂಬುಲೆನ್ಸ್ ನಲ್ಲಿ ಕುಂದಾಪುರ ಆಸ್ಪತ್ರೆಗೆ ಸಾಗಿಸಲಾಗಿದೆ.
ಕಾರು ಚಾಲಕ ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ಶಾಲೆಯ ಶಿಕ್ಷಕರಾಗಿದ್ದಾರೆ. ಅವರು ತನ್ನ ಪತ್ನಿ ಮತ್ತು ಮಗುವಿನೊಂದಿಗೆ ಉಡುಪಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

ಕೋಟ ಪೊಲೀಸ್ ಠಾಣೆಯ ಎಎಸ್ಐ ಜಯಪ್ರಕಾಶ್ ತಕ್ಷಣ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.