ಡೈಲಿ ವಾರ್ತೆ: 25/ಆಗಸ್ಟ್/2024
ಹಗಲಿರುಳು ಕೆಲಸ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರಿ ನೌಕರರ ಸ್ಥಾನಮಾನ ಕೊಡಿ : ಎ.ಐ.ಯು.ಟಿ.ಯು.ಸಿ ವಿಜಯನಗರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಡಾ.ಪ್ರಮೋದ್ ಆಗ್ರಹ
ಹರಪನಹಳ್ಳಿ: ಹಗಲಿರುಳು ಕೆಲಸ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ರಾಜ್ಯ ಸರ್ಕಾರವು ಸರ್ಕಾರಿ ನೌಕರರ ಸ್ಥಾನಮಾನ ಕೊಟ್ಟು ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ಆಶಾ ಕಾರ್ಯಕರ್ತೆಯರ ಸಂಘದ (ಎ.ಐ.ಯು.ಟಿ.ಯು.ಸಿ) ವಿಜಯನಗರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಡಾ.ಪ್ರಮೋದ್ ರವರು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಇಲ್ಲಿನ ತಾಲ್ಲೂಕು ಪಂಚಾಯ್ತಿಯ ಆವರಣದಲ್ಲಿರುವ ಸಾಮಾರ್ಥ್ಯ ಸೌಧದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹರಪನಹಳ್ಳಿ ತಾಲ್ಲೂಕು ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿ ಆಶಾ ಕಾರ್ಯಕರ್ತೆಯರಿಗೆ ನ್ಯಾಯಯುತ ವಾಗಿ ಸಿಗಬೇಕಾದ ಸೌಲಭ್ಯಗಳ ಕುರಿತಂತೆ ಸರ್ಕಾರದೊಂದಿಗೆ ನಡೆಸಿದ ಹತ್ತು ಹದಿಮೂರು ಸಭೆಗಳು ಫಲ ಕೊಟ್ಟಿಲ್ಲ. ದುಡಿಮೆಗೆ ತಕ್ಕಂತೆ ವೇತನ ಸಿಗಬೇಕೆನ್ನುವುದು ನಮ್ಮ ಬೇಡಿಕೆ. ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆಶಾ ಕಾರ್ಯಕರ್ತೆಯರು ಕಳೆದ 14 ವರ್ಷಗಳಿಂದ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ತಳಮಟ್ಟದಲ್ಲಿ ಹಗಲು–ರಾತ್ರಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ಸಿಗಬೇಕಾದ ಕನಿಷ್ಠ ಸವಲತ್ತುಗಳು ಸಿಗುತ್ತಿಲ್ಲ. ಹಲವು ಹೋರಾಟಗಳ ನಂತರ ಅವರ ಪ್ರೋತ್ಸಾಹ ಧನ ₹8 ಸಾವಿರಕ್ಕೆ ತಲುಪಿದೆ. ರಾಜ್ಯ ಸರ್ಕಾರ ಕನಿಷ್ಠ ₹21 ಸಾವಿರ ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಕಾನೂನಿನ ಪ್ರಕಾರ ಆಶಾ ಕಾರ್ಯಕರ್ತೆಯರಿಗೆ ಇಎಸ್ಐ, ಪಿಎಫ್, ಗ್ರ್ಯಾಚುಟಿ ಕೊಡಬೇಕು. ಆಶಾ ಕಾರ್ಯಕರ್ತೆಯರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಕೋವಿಡ್‌ನಲ್ಲಿ ಜೀವದ ಹಂಗು ತೊರೆದು ಆಶಾ ಕಾರ್ಯಕರ್ತೆಯರು ಕೆಲಸ ಮಾಡಿದ್ದಾರೆ. ಅವರನ್ನು ವಿಶ್ವಸಂಸ್ಥೆ ಜಾಗತಿಕ ನಾಯಕರು ಎಂದು ಕರೆದಿತ್ತು. ನಾವು ಅವರನ್ನು ಕೊರೊನಾ ವಾರಿಯರ್ಸ್ ಎಂದು ಹೇಳಿ ಬೆನ್ನು ತಟ್ಟಿದ್ದೆವು. ಆದರೆ, ಅವರ ಪರಿಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದರು.
ಎಐಯುಟಿಯುಸಿಯ ರಾಜ್ಯ ಸಮಿತಿ ಸದಸ್ಯರಾದ ದಾವಣಗೆರೆಯ ತಿಪ್ಪೇಸ್ವಾಮಿ ಮಾತನಾಡಿ ಸಾಮಾಜಿಕ ಸ್ವಾಸ್ಥಕ್ಕೆ ಅಪಾರ ಕೊಡುಗೆ ನೀಡುತ್ತಿರುವ ಆಶಾ ಅವರು ಜೀವದ ಹಂಗು ತೊರೆದು ಕೊರೊನಾ ಕಾಲದಲ್ಲಿ ಅನುಪಮ ಸೇವೆಯು ಶ್ಲಾಘಿಸುವಂತಹದು. ಈ ಸೇವೆಯನ್ನು ಗುರುತಿಸಿ ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಆರೋಗ್ಯ ನಾಯಕರು ಎಂದು ಬಣ್ಣಿಸಿದೆ. ಯಾವುದೇ ಸೌಲಭ್ಯಗಳಿಲ್ಲದೇ ಕಡಿಮೆ ಗೌರವಧನವನ್ನು ಪಡೆದು ಹೆಚ್ಚಿನ ಸೇವೆ ಮಾಡುತ್ತಿರುವ ಆಶಾ ಅವರಿಗೆ ಸೂಕ್ತ ಸ್ಥಾನಮಾನ ಹಾಗೂ ಆರ್ಥಿಕ ಸೌಲಭ್ಯಗಳು ದೊರೆಯಬೇಕಾಗಿದೆ. ಕನಿಷ್ಠ ₹ 21ಸಾವಿರ ವೇತನ, 60 ವರ್ಷ ಪೂರೈಸಿದವರಿಗೆ ಇಡುಗಂಟು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಮೊದಲ ಆದ್ಯತೆಯಾಗಬೇಕಾಗಿದೆ ಎಂದು ಒತ್ತಾಯಿಸಿದರು.
ಆಶಾ ಕಾರ್ಯಕರ್ತೆಯರ ಸಂಘದ (ಎ.ಐ.ಯು.ಟಿ.ಯು.ಸಿ)ಯ ಹರಪನಹಳ್ಳಿ ತಾಲ್ಲೂಕು ಅಧ್ಯಕ್ಷರಾದ ಪಿ.ಎ ಗೀತಾ ಸಮ್ಮೇಳನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಹಾಗೂ ಪ್ರಾಸ್ತಾವಿಕವಾಗಿ ಮಾತನಾಡಿ ಕೆಲಸದ ಸ್ಥಳದಲ್ಲಿ ಆಶಾ ಕಾರ್ಯಕರ್ತೆಯರನ್ನು ಗೌರವದಿಂದ ನಡೆಸಿಕೊಳ್ಳಬೇಕು. ದುಡಿಮೆಗೆ ತಕ್ಕಂತೆ ವೇತನ ಕೊಡಬೇಕು. ಹದಗೆಟ್ಟಿರುವ ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಆಶಾ ಕಾರ್ಯಕರ್ತೆಯರು ಹಲವು ಸವಾಲುಗಳ ಮಧ್ಯೆ ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರ ಕನಿಷ್ಠ ಪ್ರೋತ್ಸಾಹ ಧನ ಕೊಟ್ಟು ಸಾಕಷ್ಟು ಕೆಲಸಗಳನ್ನು ಮಾಡಿಸಿಕೊಳ್ಳುತ್ತಿರುವುದು ದುರದೃಷ್ಟಕರ ಎಂದರು.
ಆಶಾ ಕಾರ್ಯಕರ್ತೆಯರು ಸರ್ಕಾರ ಮತ್ತು ಜನರ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದೇವೆ,. ಆರೋಗ್ಯ ಕ್ಷೇತ್ರವಲ್ಲದೇ ಸರ್ಕಾರದ ಇತರೆ ಯೋಜನೆಗಳಿಗೂ ನಮ್ಮನ್ನು ದುಡಿಸಿಕೊಳ್ಳಲಾಗುತ್ತಿದೆ. ಆದರೆ, ನಮಗೆ ಸಾಮಾಜಿಕ ಭದ್ರತೆ ಇಲ್ಲ. ನಮಗೆ ₹5 ಲಕ್ಷದ ವರೆಗೆ ಆರೋಗ್ಯ ಸೌಲಭ್ಯ ಕಲ್ಪಿಸಬೇಕು. ಬೆಲೆ ಏರಿಕೆಗೆ ತಕ್ಕಂತೆ ನಮ್ಮ ವೇತನವೂ ಹೆಚ್ಚಾಗಬೇಕು. ಆದರೆ, ಆ ನಿಟ್ಟಿನಲ್ಲಿ ಸರ್ಕಾರ ಗಮನಹರಿಸುತ್ತಿಲ್ಲ ಎಂದು ಆಗ್ರಹಪಡಿಸಿದರು.
ಈ ಸಂದರ್ಭದಲ್ಲಿ ಎಐಯುಟಿಯುಸಿಯ ತಾಲ್ಲೂಕು ಕಾರ್ಯದರ್ಶಿ ರಾಧಮ್ಮ, ವೀಣಾ, ರೂಪಾ, ಅಂಜಿನಮ್ಮ, ಅನಿತಾ, ನಗೀನಾ, ಶಾರದ, ಪಿ.ಅಂಜಿನಮ್ಮ, ರೇಖಾ, ಲತಾ, ಪ್ರೇಮಕುಮಾರಿ, ನಾಗಮ್ಮ, ನೀಲಮ್ಮ, ಕವಿತಾ, ಅಶ್ವಿನಿ, ಶಂಕ್ರಮ್ಮ, ರೇಣುಕಾ ಸೇರಿದಂತೆ ಎಲ್ಲಾ ಆಶಾ ಸುಗಮಕಾರರು ಉಪಸ್ಥಿತರಿದ್ದರು.