ಡೈಲಿ ವಾರ್ತೆ: 25/ಆಗಸ್ಟ್/2024
ಕಾಪು: ಕಾಂಗ್ರೆಸ್ ಮುಖಂಡ ಗುಲಾಂ ಮುಹಮ್ಮದ್ ಕೊಲೆಗೆ ಸಂಚು – ದೂರು ದಾಖಲು
ಕಾಪು: ಅಪರಿಚಿತರ ತಂಡವೊಂದು ಕಾಂಗ್ರೆಸ್ ಮುಖಂಡ ಗುಲಾಂ ಮುಹಮ್ಮದ್ ಹೆಜಮಾಡಿ(55) ಅವರ ಕಾರನ್ನು ಬೆನ್ನಟ್ಟಿರುವ ಘಟನೆ ಆ.24ರಂದು ಸಂಜೆ 6ಗಂಟೆ ಸುಮಾರಿಗೆ ಉದ್ಯಾವರ ಸೇತುವೆ ಬಳಿ ನಡೆದಿರುವ ಬಗ್ಗೆ ದೂರು ದಾಖಲಾಗಿದೆ.
ಗುಲಾಂ ಮುಹಮ್ಮದ್ ಅವರು ತನ್ನ ಕಾರಿನಲ್ಲಿ ಚಾಲಕ ಆಸಿಫ್ ಹಾಗೂ ಸೂಪರ್ ವೈಸರ್ ಅಬೂಬಕ್ಕರ್ ಅವರೊಂದಿಗೆ ಮಣಿಪಾಲದಿಂದ ಹೆಜಮಾಡಿಗೆ ಬರುತ್ತಿದ್ದು, ಉದ್ಯಾವರ ಸೇತುವೆಯ ಬಳಿ ತಲುಪುತ್ತಿದ್ದಂತೆ ಹಿಂದಿನಿಂದ ಮೂವರು ಅಪರಿಚಿತರು ಬಿಳಿ ಬಣ್ಣದ ಹಳೆಯ ಸೆಲಾರಿಯೋ ಕಾರಿನಲ್ಲಿ ಕೊಲೆ ಮಾಡುವ ಉದ್ದೇಶದಿಂದ ಬೆನ್ನಟ್ಟಿ ಬಂದರೆಂದು ದೂರಲಾಗಿದೆ.
ಅಪರಿಚಿತರು ಗುಲಾಂ ಅವರ ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆಯುವ ರೀತಿಯಲ್ಲಿ ತಮ್ಮ ಕಾರನ್ನು ದುಡುಕುತನದಿಂದ ಚಲಾಯಿಸಿಕೊಂಡು ಹೋದರು. ಮುಂದೆ ಕಟಪಾಡಿ ಜಂಕ್ಷನ್ ಬಳಿ ಕಾರನ್ನು ನಿಲ್ಲಿಸಿದಾಗ 3 ಜನ ಅಪರಿತರು ತಮ್ಮ ಕಾರಿನ ಕಿಟಕಿಯ ಮೂಲಕ ಗುಲಾಂ ಅವರನ್ನು ದುರುಗುಟ್ಟಿಕೊಂಡು ನೋಡುತ್ತಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ. ಗುಲಾಂ ಮುಹಮ್ಮದ್ ಅವರು ಭಯದಿಂದ ತಮ್ಮ ಕಾರನ್ನು ವೇಗವಾಗಿ ಶಿರ್ವ ರಸ್ತೆ ಕಡೆಗೆ ಚಲಾಯಿಸಿದರು ಎನ್ನಲಾಗಿದೆ.
ಈ ವೇಳೆ ಹಿಂದೆ ಇದ್ದ ಅಪರಿಚಿತ ಕಾರಿನವರು ಮಂಗಳೂರು ಕಡೆಗೆ ಹೋದರು. ಈ ಮೂವರು ಅಪರಿಚಿತರು ಉದ್ದೇಶ ಪೂರ್ವಕವಾಗಿ ಗುಲಾಂ ಮುಹಮ್ಮದ್ ಅವರನ್ನು ಕೊಲ್ಲುವ ಉದ್ದೇಶದಿಂದ ಹಾಗೂ ಭಯ ಹುಟ್ಟಿಸಲು ಈ ಕೃತ್ಯ ಎಸಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.