ಡೈಲಿ ವಾರ್ತೆ: 25/ಆಗಸ್ಟ್/2024

ಬೋನ್ ಕ್ಯಾನ್ಸರ್ ದಿಂದ ಬಳಲುತ್ತಿದ್ದ ಪುಟ್ಟ ಬಾಲಕನಿಗೆ ದಿಟ್ಟ ಸಹಾಯ ಒದಗಿಸಿದ ಕೋಟ ಬಾರಿಕೆರೆ ಯುವಕ ಮಂಡಲ

ಕೋಟ: ಬ್ರಹ್ಮಾವರ ತಾಲೂಕು ಕೋಟ ಪರಿಸರದಲ್ಲಿ ಸಮಾಜ ಸೇವೆ, ನೊಂದವರು ಮತ್ತು ದುರ್ಬಲರಿಗೆ ಆಸರೆಯಾಗುವುದೇ ಮೊದಲಾದ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದು, ಸರ್ವರ ಮೆಚ್ಚಿಕೆಗೆ ಪಾತ್ರವಾಗಿರುವ ಬಾರಿಕೆರೆ ಯುವಕ ಮಂಡಲವು ಇದೀಗ ಪುಟ್ಟ ಬಾಲಕನಿಗೆ ದಿಟ್ಟ ಸಹಾಯ ಒದಗಿಸುವುದರ ಮೂಲಕ ತನ್ನ ಸೇವಾ ಪರಂಪರೆಯನ್ನು ಮುಂದುವರೆಸಿದೆ. 4 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ, 10 ರ ಹರೆಯದ ಪುಟ್ಟ ಬಾಲಕನ ಚಿಕಿತ್ಸೆ ನೆರವಿಗೆ ಸಹಾಯ ಹಸ್ತ ಚಾಚುವ ಮೂಲಕ ಆ ಬಡ ಕುಟುಂಬದ ವ್ಯಥೆಯ ಕಣ್ಣೀರೊರೆಸುವಲ್ಲಿ ಕೈ ಜೋಡಿಸಿದೆ.

ಕುಂದಾಪುರ ತಾಲೂಕು ಉಳ್ಳೂರು ನಿವಾಸಿಗಳಾದ ಶ್ರೀಮತಿ ಆಶಾ ಮತ್ತು ಶ್ರೀ ರಾಘವೇಂದ್ರ ದಂಪತಿಯ ಪುತ್ರ ಕೃತಿಕ್ ಎಂಬಾತನ ಮೂಳೆ ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆಗೆ 75,000 ರೂ. ಸಹಾಯ ಒದಗಿಸಿದೆ.

ವಾಸ್ತವವಾಗಿ, ಬಾಲಕನ ಚಿಕಿತ್ಸೆಗೆ ಸುಮಾರು 25 ಲಕ್ಷ ರೂ. ಬೇಕಾಗಬಹುದು ಎಂದು ಪರಿಣತ ಡಾಕ್ಟರರು ತಿಳಿಸಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಹಣ ಹೊಂದಿಸಲಾಗದೆ ಪರದಾಡುತ್ತಿದ್ದ ಕುಟುಂಬಕ್ಕೆ ಬಾರಿಕೆರೆ ಯುವಕ ಮಂಡಲದ ಈ ಸಹಾಯ ಕಿಂಚಿತ್ ಶಕ್ತಿ ತುಂಬಿದೆ. ಇನ್ನೂ ಹಣ ಹೊಂದಿಸುವಲ್ಲಿ ಯುವಕ ಮಂಡಲದ ಸಹೃದಯಿ ಸದಸ್ಯರು ಶ್ರಮಿಸುತ್ತಿದ್ದಾರೆ.

ಈ ಬಡ ಕುಟುಂಬದ ಸಂಕಷ್ಟದ ವಿವರ ಇಂತಿದೆ :
ಬಡ ಕುಟುಂಬದಲ್ಲಿ ಜನಿಸಿದ ಶ್ರೀಮತಿ ಆಶಾ ಮತ್ತು ಶ್ರೀ ರಾಘವೇಂದ್ರರವರು ಕುಂದಾಪುರ ತಾಲ್ಲೂಕಿನ ಉಳ್ಳೂರು ಗ್ರಾಮದ ನಿವಾಸಿಗಳು, ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ ರಾಘವೇಂದ್ರರವರು ಸ್ವಂತ ಅಂಗಡಿ ಮಾಡಬೇಕೆಂಬ ಕನಸಿನೊಂದಿಗೆ ದುಡಿದ ಸಂಪಾದನೆಯಲ್ಲಿ ಕೂಡಿಟ್ಟ ಮೊತ್ತದಲ್ಲಿ ಚಿಕ್ಕ ಬೇಕರಿಯನ್ನು ಭೋಗ್ಯಕ್ಕೆ(ಲೀಸ್‌ಗೆ) ತೆಗೆದುಕೊಂಡು ಗಂಡಹೆಂಡತಿ ಇಬ್ಬರೂ ಬೇಕರಿಯಲ್ಲಿ ದುಡಿಯುತ್ತಾ ಜೀವನವನ್ನು ಸಾಗಿಸುತ್ತಿದ್ದರು. ಏಕಮಾತ್ರ ಪುತ್ರನಾದ ಸುಮಾರು 10ವರ್ಷದ ಕೃತಿಕ್ 4ನೇ ತರಗತಿಯಲ್ಲಿ ಓದುತ್ತಿದ್ದಾನೆ, ಕಳೆದ 2.05.2024ರಂದು ಊರಿನಲ್ಲಿ ಮಗನಿಗೆ ಬ್ರಹ್ಮೋಪದೇಶ ಕೊಡಿಸಿ ಪುನಃ ಬೆಂಗಳೂರಿಗೆ ಬಂದರು.

ಕೆಲವು ದಿನಗಳ ನಂತರ ಕೃತಿಕನ ಆರೋಗ್ಯದಲ್ಲಿ ಏರುಪೇರು ಕಾಣಿಸಿತು. ನಂತರ ಹಲವಾರು ಆಸ್ಪತ್ರೆಗಳ ನಂತರ ನುರಿತ ಡಾಕ್ಟರ್ ರೊಬ್ಬರ ಸಲಹೆ ಪಡೆದಾಗ ತಿಳಿಯಿತು ಬಾಲಕನು ಬೋನ್ ಕ್ಯಾನ್ಸರ್ ಎಂಬ ಮಹಾಮಾರಿ ಕಾಯಿಲೆಗೆ ತುತ್ತಾಗಿದ್ದಾನೆ ಎಂದು. ಸದ್ಯ ಬೆಂಗಳೂರಿನ ಹೆಚ್.ಸಿ.ಜಿ. ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.