ಡೈಲಿ ವಾರ್ತೆ: 28/ಆಗಸ್ಟ್/2024
ಕಾರ್ಕಳ ಯುವತಿಯ ಅತ್ಯಾಚಾರ ಪ್ರಕರಣ: 3ನೇ ಆರೋಪಿ ಬಿಜೆಪಿ ಕಾರ್ಯಕರ್ತನ ಫೋಟೋ ಬಿಡುಗಡೆ ಮಾಡಿದ ಕಾಂಗ್ರೆಸ್
ಉಡುಪಿ: ಜಿಲ್ಲೆಯ ಕಾರ್ಕಳದಲ್ಲಿ ಇತ್ತೀಚೆಗೆ ನಡೆದಿದ್ದ ಯುವತಿಯ ಅತ್ಯಾಚಾರ ಪ್ರಕರಣದ ಮೂರನೇ ಆರೋಪಿ ಅಭಯ್ ಬಿಜೆಪಿ ಕಾರ್ಯಕರ್ತ ಎಂದು ಹೇಳಿರುವ ಕಾಂಗ್ರೆಸ್ ಈ ಸಂಬಂಧ ಆತನ ಫೋಟೋಗಳನ್ನು ಇಂದು (ಆ.28 ರಂದು ಬುಧವಾರ) ಬಿಡುಗಡೆ ಮಾಡಿದೆ.
ಉಡುಪಿಯ ಪ್ರೆಸ್ ಕ್ಲಬ್‌ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕಾರ್ಕಳ ಮತ್ತು ಉಡುಪಿ ಯುವ ಕಾಂಗ್ರೆಸ್ ನಾಯಕರು ಫೋಟೋ ಬಿಡುಗಡೆಗೊಳಿಸಿದ್ದಲ್ಲದೇ, ಬಿಜೆಪಿಯ ದ್ವಂದ್ವ ನಿಲುವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣದ ಮೊದಲ ಆರೋಪಿ ಅಲ್ತಾಫ್ ಎಂಬಾತನ ಬಂಧನ ನಡೆದಾಗ ಬಿಜೆಪಿ ಪಟಾಲಂ ಅಬ್ಬರಿಸಿ ಬೊಬ್ಬಿರಿಯಿತು. ಸಂತ್ರಸ್ತ ಹುಡುಗಿ ಹಿಂದೂವಾಗಿ ಕಂಡಳು. ಅತ್ಯಾಚಾರ ಪ್ರಕರಣವನ್ನು “ಜಿಹಾದಿ” ಕೃತ್ಯವಾಗಿ ಚಿತ್ರಿಸಲಾಯಿತು. ಸರಣಿ ಪ್ರತಿಭಟನೆ, ಪತ್ರಿಕಾ ಹೇಳಿಕೆಗಳು ಹೊರಟವು. ಎನ್‌ಐಎ ತನಿಖೆ ನಡೆಯಬೇಕೆಂಬ ಆಗ್ರಹಗಳು ಕೇಳಿ ಬಂದವು. ಆದರೆ ಬಂಧನಕ್ಕೊಳಗಾಗಿದ್ದ ಮೂರನೇ ಆರೋಪಿ ಅಭಯ್, ಬಿಜೆಪಿ ಕಾರ್ಯಕರ್ತ ಎಂದು ಗೊತ್ತಾದ ಬಳಿಕ ಬಿಜೆಪಿ ಮೌನಕ್ಕೆ ಶರಣಾಗಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.
ಹಿಂದೂ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಡ್ರಗ್ಸ್ ಪೂರೈಸಿದ್ದ ಮೂರನೇ ಆರೋಪಿ ಅಭಯ್, ಮಾಜಿ ಸಚಿವ ಸುನಿಲ್ ಆಪ್ತನಾಗಿದ್ದಾನೆ. ಇದಕ್ಕೆ ಸಾಕ್ಷಿ ಎಂಬಂತೆ ಫೇಸ್‌ಬುಕ್ ಪ್ರೊಫೈಲ್‌ನಲ್ಲೂ ಕೂಡ ಸುನಿಲ್ ಕುಮಾರ್ ಫೋಟೋ ಹಾಕಿಕೊಂಡಿದ್ದಾನೆ. ಈತ ಕಾರ್ಕಳ ಬಿಜೆಪಿಯಲ್ಲಿ ಸಕ್ರಿಯ ಸದಸ್ಯನಾಗಿದ್ದಾನೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಉಡುಪಿ ನಗರಸಭೆ ಸದಸ್ಯ ರಮೇಶ್ ಕಾಂಚನ್ ಫೋಟೋವನ್ನು ಮಾಧ್ಯಮಗಳಿಗೆ ಪ್ರದರ್ಶಿಸಿದರು.
ಮೂರನೇ ಆರೋಪಿ ಅಭಯ್ ಬಂಧವಾಗಿರುವುದು ಗೊತ್ತಾಗುತ್ತಿದ್ದಂತೆ ಬಿಜೆಪಿ ನಾಯಕರು ಇಡೀ ಹೋರಾಟವನ್ನು ಕೈಬಿಟ್ಟಿದ್ದಾರೆ. ಕಾರ್ಕಳದಲ್ಲಿ ಅತ್ಯಾಚಾರ ಪ್ರಕರಣವನ್ನು ನಾವೆಲ್ಲರೂ ಖಂಡಿಸುತ್ತೇವೆ. ಆದರೆ ಅತ್ಯಾಚಾರದಂತಹ ಪ್ರಕರಣದಲ್ಲಿ ಯಾವುದೇ ಧರ್ಮ, ಪಕ್ಷದವರಿದ್ದರೂ ಅದನ್ನು ಖಂಡಿಸುವ ಬದಲು ಬಿಜೆಪಿಯವರು ಧರ್ಮಾಧಾರಿತವಾಗಿ ನೋಡುತ್ತಿದ್ದಾರೆ. ಇದು ಖಂಡನೀಯ. ಜನರು ಬಿಜೆಪಿಯ ದ್ವಂದ್ವ ನಿಲುವುಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರು ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ಎನ್‌ಎಸ್‌ಯುಐ ಮುಖಂಡ ಸೌರಭ್ ಬಲ್ಲಾಳ್, ಕಾರ್ಕಳ ಯೂತ್ ಕಾಂಗ್ರೆಸ್ ಅಧ್ಯಕ್ಷ ಯೋಗೇಶ್, ದಿನೇಶ್ ಕೋಟ್ಯಾನ್ ಸೇರಿದಂತೆ ಹಲವರಿದ್ದರು.