ಡೈಲಿ ವಾರ್ತೆ: 09/Sep/2024

ಯುವಕರ ಯಡವಟ್ಟಿನಿಂದ 65 ಗ್ರಾಂ ಚಿನ್ನದ ಸರ ಸಮೇತ ಗಣೇಶನ ವಿಸರ್ಜನೆ – ಇಡೀ ರಾತ್ರಿ ಹುಡುಕಾಟದ ನಂತರ ಪತ್ತೆ!

ಬೆಂಗಳೂರು: ಯುವಕರ ಒಂದು ಸಣ್ಣ ಯಡವಟ್ಟಿನಿಂದ ಪೂಜೆಗೆ ಎಂದು ಗಣೇಶ ಮೂರ್ತಿಗೆ ಹಾಕಿದ ಚಿನ್ನದ ಸರಕ್ಕಾಗಿ ಯುವಕರ ಗುಂಪು ರಾತ್ರಿ ಪೂರ್ತಿ ಹುಡುಕಾಟ ನಡೆಸಿದ ಘಟನೆ ಮಾಗಡಿ ರಸ್ತೆ ದಾಸರಹಳ್ಳಿ ಸಮೀಪದ ಬಿ.ಆರ್‌.ಐ ಕಾಲೋನಿಯಲ್ಲಿ ನಡೆದಿದೆ.

ಗಣೇಶನಿಗಾಗಿ 65 ಗ್ರಾಂ ಚಿನ್ನದ ಸರ ಹಾಕಿ ಯುವಕರು ಪೂಜೆ ಮಾಡಿದ್ದರು. ಆದರೆ, ಶನಿವಾರ ಸಂಜೆ ವಿಸರ್ಜನೆ ವೇಳೆ ನೆನಪು ಮರೆತ ಯುವಕರು ಚಿನ್ನದ ಸರದ ಸಮೇತ ಗಣೇಶ ಮೂರ್ತಿ ವಿಸರ್ಜನೆ ಮಾಡಿದ್ದಾರೆ. ಗಣೇಶ ವಿಸರ್ಜನೆಗಾಗಿ ಬಿಬಿಎಂಪಿಯಿಂದ ಟ್ರಕ್‌ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಶನಿವಾರ ಸಂಜೆ 7 ಗಂಟೆಗೆ ಹೋಗಿ ಚಿನ್ನದ ಸರದ ಸಮೇತ ಗಣೇಶ ಮೂರ್ತಿ ವಿಸರ್ಜನೆ ಮಾಡಿದ್ದರು. ಆದರೆ, ರಾತ್ರಿ 10 ಗಂಟೆ ವೇಳೆ ಯುವಕರಿಗೆ ದಿಢೀರ್‌ ಎಂದು ಚಿನ್ನದ ಸರದ ನೆನಪಾಗಿದೆ. ನಂತರ ಓಡೋಡಿ ಬಂದ ಯುವಕರು ತಕ್ಷಣ ಟ್ರಕ್‌ನ ಚಾಲಕ, ಬಿಬಿಎಂಪಿ ಸಿಬ್ಬಂದಿಗೆ ವಿಚಾರ ತಿಳಿಸಿದ್ದಾರೆ.

ಈ ವೇಳೆ ಟ್ರಕ್‌ನಲ್ಲಿದ್ದ ನೀರನ್ನು ಖಾಲಿ ಮಾಡಿ, ಗಣೇಶ ಮೂರ್ತಿ ಕರಗಿದ್ದ ಮಣ್ಣಲ್ಲಿ ಚಿನ್ನದ ಸರಕ್ಕೆ ಹುಡುಕಾಟ ನಡೆಸಿದ್ದಾರೆ. ರಾತ್ರಿಯೆಲ್ಲ ಹುಡುಕಾಡಿದ ಬಳಿಕ ಬೆಳಗಿನ ಜಾವ 65 ಗ್ರಾಂ ಚಿನ್ನದ ಸರ ಸಿಕ್ಕಿದೆ. ಚಿನ್ನದ ಸರ ಕಂಡು ಯುವಕರು ನಿಟ್ಟುಸಿರು ಬಿಟ್ಟಿದ್ದಾರೆ.