ಡೈಲಿ ವಾರ್ತೆ: 12/Sep/2024

ಕುಂದಾಪುರ: ಸುಣ್ಣಾರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜ್ ಮತ್ತು ಹೈಸ್ಕೂಲ್ ನಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರ: ಜೀವನದಲ್ಲಿ ಮನುಷ್ಯನಿಗೆ ಗುರಿ ಮುಖ್ಯ – ಆರ್.ಜೆ. ನಯನಾ

ಕುಂದಾಪುರ: ನಮ್ಮಲ್ಲಿನ ಸಾಮರ್ಥ್ಯಗಳು ಹುಟ್ಟಿನಿಂದ ಬರುವಂತದ್ದಲ್ಲ. ಸತತ ಪ್ರಯತ್ನದಿಂದ ಜೀವನದಲ್ಲಿ ಗುರಿಯನ್ನು ತಲುಪಲು ಸಾಧ್ಯ. ಆದ್ದರಿಂದ ವ್ಯಕ್ತಿಗೆ ಜೀವನದಲ್ಲಿ ಗುರಿ ಮುಖ್ಯ ಎಂದು ಎಫ್ಎಂ ರೇಡಿಯೋ ಮಂಗಳೂರು ಆರ್.ಜೆ. ನಯನ ಹೇಳಿದರು.

ಅವರು ಸುಣ್ಣಾರಿಯಲ್ಲಿನ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜ್ ಮತ್ತು ಹೈಸ್ಕೂಲ್ ನಲ್ಲಿ ಸೆ. 11 ರಂದು ಬುಧವಾರ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಗೊತ್ತು ಗುರಿ ಇಲ್ಲದ ಜೀವನ ಅಡ್ಡಾದಿಡ್ಡಿಯಾಗಿ ಹೋಗುತ್ತೆ. ನಾವು ಏನು ಮಾಡ್ತಾ ಇದ್ದೀವಿ ಎಂದು ಅರ್ಥಮಾಡಿಕೊಳ್ಳುವುದರೊಳಗೆ ನಮ್ಮ ಜೀವನ ಮುಗಿದು ಹೋಗಿರುತ್ತದೆ. ಅದಕ್ಕಾಗಿ
ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕೆನ್ನುವುದರ ಬಗ್ಗೆ ಅವರು ತಿಳಿಸಿದರು.

ಆಯಾಚಿತವಾಗಿ ನಾವು ಭೂಮಿಗೆ ಬಂದಿದ್ದೇವೆ. ನಮ್ಮಿಂದಾಗಿ ಪರರಿಗೆ ಉಪಕಾರ ಅಗುಬೇಕು. ಆಗ ಮನುಷ್ಯ ಜೀವನ ಸಾರ್ಥಕವಾಗುತ್ತದೆ ಎಂದರು. ಮನುಷ್ಯ ಯಾವುದೇ ಕೆಲಸ ಮಾಡಬೇಕೆಂದರೆ ಅದರಲ್ಲಿ ನಂಬಿಕೆ ಮುಖ್ಯ. ಹುಟ್ಟುವಾಗಲೇ ಮನುಷ್ಯನಿಗೆ ಪ್ರತಿಭೆ ಎನ್ನುವುದು ಬರುವುದಿಲ್ಲ. ಅದು ಮನುಷ್ಯ ಬೆಳೆಯುತ್ತ ಬೆಳೆಯುತ್ತಲೇ ಬರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ವಿಶಿಷ್ಟ ಪ್ರತಿಭೆ ಮತ್ತು ಆಸಕ್ತಿಗಳಿರುತ್ತವೆ. ನಾವು ಅವನ್ನು ಗ್ರಹಿಸಿ ಉತ್ತಮಪಡಿಸಿಕೊಳ್ಳಬೇಕು ಎಂದು ಅವರು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಸೂತ್ರವನ್ನು ತಿಳಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ ಯುನಿಟ್ ಆಫ್ ಎಮ್.ಎಮ್. ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಇದರ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ವಹಿಸಿದ್ದರು. ಅವರು ಮಾತನಾಡಿ ವಿದ್ಯಾರ್ಥಿಗಳು ಓದಿನೊಂದಿಗೆ ನಿಮ್ಮ ಗುಣನಡತೆಯನ್ನು ರೂಪಿಸಿಕೊಳ್ಳಿ. ಜೀವನದಲ್ಲಿ ಒಳ್ಳೆ ವ್ಯಕ್ತಿಯಾಗಿ, ಒಳ್ಳೆ ನಾಗರಿಕರಾಗಿ ಸಮಾಜಕ್ಕೆ ನಿಮ್ಮಿಂದ ಒಂದು ಒಳ್ಳೆ ಸಂದೇಶ ತಲುಪುವಂತಾಗಬೇಕು. ಇದರಿಂದ ಮುಂದೆ ಯಶಸ್ವಿ ಪ್ರಜೆಗಳಾಗಿ ಬೆಳೆಯುತ್ತೀರಿ ಎಂದು ಶುಭ ಹಾರೈಸಿದರು.

ಸುಣ್ಣಾರಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಶಿಸ್ತು ಮುಖ್ಯ. ಅದು ನಾವು ಆರಿಸಿಕೊಳ್ಳುವ ಗೆಳೆಯರಿಂದ ಬರುತ್ತದೆ. ಅದಕ್ಕಾಗಿ ವ್ಯಕ್ತಿ ಹಾಗೂ ಗುಣವನ್ನು ನೋಡಿ ಗೆಳೆತನ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನ ಹೇಳಿದರು.

ಎಕ್ಸಲೆಂಟ್ ಹೈಸ್ಕೂಲ್‌ ಮುಖ್ಯೋಪಾಧ್ಯಾ ಯಿನಿ ಸರೋಜಿನಿ ಪಿ. ಆಚಾರ್ಯ ಅವರು ಸ್ವಾಗತಿಸಿದರು.
ಅಧ್ಯಾಪಕ ಸಂದೀಪ್ ನಿರೂಪಿಸಿದರು.
ವಿದ್ಯಾರ್ಥಿನಿ ಶಿವಾನಿ ಶೆಟ್ಟಿ ವಂದಿಸಿದರು.