ಡೈಲಿ ವಾರ್ತೆ: 19/Sep/2024

ಮರಳು ತೆಗೆದ ವಿಚಾರದಲ್ಲಿ ಜಗಳ ಓರ್ವ ಸಾವು, ಇನ್ನೋರ್ವ ಗಂಭೀರ

ದಾವಣಗೆರೆ: ತುಂಗಭದ್ರಾ ನದಿ ಪಾತ್ರದಲ್ಲಿನ ಮರಳು ತೆಗೆದ ವಿಚಾರವಾಗಿ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ನ್ಯಾಮತಿ ತಾಲೂಕಿನ ಮರಿಗೊಂಡನ ಹಳ್ಳಿಯಲ್ಲಿ ನಡೆದಿದೆ.

ತುಂಗಭದ್ರಾ ನದಿಪಾತ್ರದ ಮರಳಿಗಾಗಿ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಘರ್ಷಣೆ ಸಂದರ್ಭದಲ್ಲಿ ಇಬ್ಬರಿಗೆ ಚಾಕುವಿನಿಂದ ಇರಿಯಲಾಗಿದೆ.

ಚಾಕು ಇರಿತದಿಂದ ಮೃತಪಟ್ಟ ವ್ಯಕ್ತಿ ಶಿವರಾಜ್(33) ಎಂದು ಗುರುತಿಸಲಾಗಿದೆ.
ಭರತ್‌ಎಂಬಾತ ತೀವ್ರವಾಗಿ ಗಾಯ ಗೊಂಡಿದ್ದು ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಚ್. ಕಡದಕಟ್ಟೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸತೀಶ್ ಎಂಬುವರು ಶಾಲಾ ಕಾಂಪಾಂಡ್ ನಿರ್ಮಾಣದ ಗುತ್ತಿಗೆ ಪಡೆದಿದ್ದು, ಕಾಮಗಾರಿಗಾಗಿ ತುಂಗಭದ್ರಾ ನದಿಯಿಂದ ಮರಳು ತಂದಿದ್ದರು. ಈ ವಿಷಯವನ್ನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗಮನಕ್ಕೆ ತರಲಾಗಿತ್ತು. ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಂಬಂಧಿತರಿಗೆ ನೋಟಿಸ್ ಜಾರಿ ಮಾಡಿದ್ದರು.
ನದಿಯಿಂದ ಮರಳು ತೆಗೆದಿದ್ದ ವಿಚಾರವನ್ನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗಮನಕ್ಕೆ ತಂದಿದ್ದು ಬಗ್ಗೆ ಸತೀಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಬುಧವಾರ ಬೆಳಗ್ಗೆ ಮಾತಿನ ಚಕಮಕಿ ನಡೆಸಿದ್ದರು. ಮಧ್ಯಾಹ್ನ ಸತೀಶ್, ಅವರ ಪುತ್ರ ಅಭಿ ಇತರರು ಮತ್ತೆ ವಿಚಾರ ಪ್ರಸ್ತಾಪಿಸಿದ್ದಾರೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ನಡೆದ ಘರ್ಷಣೆಯಲ್ಲಿ ಶಿವರಾಜ್ ಎಂಬಾತ ಮೃತಪಟ್ಟಿದ್ದು, ಭರತ್ ಎಂಬಾತ ತೀವ್ರವಾಗಿ ಗಾಯ ಗೊಂಡಿದ್ದಾರೆ.