ಡೈಲಿ ವಾರ್ತೆ: 21/Sep/2024
ಮಾಣಿ ಬಾಲವಿಕಾಸದಲ್ಲಿ “ಸ್ವಾಸ್ಥ್ಯ ಸಂಕಲ್ಪ”ಕಾರ್ಯಕ್ರಮ.
ಬಂಟ್ವಾಳ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿಟ್ಲ ತಾಲ್ಲೂಕು ಜನಜಾಗೃತಿ ವೇದಿಕೆಯ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದ ಸಮಾರೋಪ ಸಮಾರಂಭವು ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷ ಪ್ರಹ್ಲಾದ ಶೆಟ್ಟಿ ಮಾತನಾಡಿ, “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಉತ್ತಮ ಸಮಾಜವನ್ನು ಕಟ್ಟುವಲ್ಲಿ ಶ್ರಮಿಸುತ್ತಿದೆ. ಯೋಜನೆಯ ಈ ಮಹತ್ತರವಾದ ಕೊಡುಗೆ ವಿದ್ಯಾರ್ಥಿಗಳ ಜೀವನದಲ್ಲಿ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನಲ್ಲಿ ದುಶ್ಚಟಗಳಿಗೆ ಬಲಿಯಾಗದೆ ಒಳ್ಳೆಯ ವಿದ್ಯಾಭ್ಯಾಸದೊಂದಿಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕಲು ಕಲಿಯಬೇಕು.” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಣಿ ವಲಯದ ಅಧ್ಯಕ್ಷರಾದ ರಾಜಾರಾಮ್ ಶೆಟ್ಟಿ ಕೋಲ್ಪೆ ಮಾತನಾಡಿ, “ ಬಾಲವಿಕಾಸ ಶಾಲೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಅತ್ಯುನ್ನತ ಸಂಸ್ಥೆಯಾಗಿದ್ದು. ಯೋಜನೆಯ ಅಂಗವಾಗಿ ಏರ್ಪಡಿಸಿದ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಿವೇಕ್ ವಿನ್ಸೆಂಟ್ ಪಾಯ್ಸ್ ಮಾಹಿತಿ ನೀಡಿದರು. ಬಾಲವಿಕಾಸ ಸಂಸ್ಥೆಯ ಕಾರ್ಯದರ್ಶಿ ಮಹೇಶ್ ಶೆಟ್ಟಿ , ಮುಖ್ಯ ಶಿಕ್ಷಕಿ ಸುಪ್ರಿಯಾ ಡಿ,
ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಪ್ರಸ್ತಾವನೆಗೈದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ತಾಲೂಕು ಯೋಜನಾಧಿ ರಮೇಶ್ ಸ್ವಾಗತಿಸಿ, ಸಂಸ್ಥೆಯ ಸಹ ಶಿಕ್ಷಕಿ ಶೋಭಾ ಎಂ ಶೆಟ್ಟಿ ವಂದಿಸಿದರು. ಲೀಲಾ ಮಯ್ಯ ಕಾರ್ಯಕ್ರಮ ನಿರೂಪಿಸಿದರು.