ಡೈಲಿ ವಾರ್ತೆ: 11/OCT/2024
ದತ್ತಪೀಠ, ಮುಳ್ಳಯ್ಯನಗಿರಿ ಮಾರ್ಗದಲ್ಲಿ 250 ಅಡಿ ಎತ್ತರದಿಂದ ಪ್ರಪಾತಕ್ಕೆ ಬಿದ್ದ ಕಾರು – ಐವರು ಪಾರು!
ಚಿಕ್ಕಮಗಳೂರು: ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಕಾರೊಂದು 250 ಅಡಿ ಎತ್ತರದಿಂದ ಬಿದ್ದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ದತ್ತಪೀಠ ಮಾರ್ಗದ ಕವಿಕಲ್ ಗಂಡಿ ಬಳಿ ನಡೆದಿದೆ.
ತೆಲಂಗಾಣ ರಾಜ್ಯದ ನೋಂದಣಿ ಹೊಂದಿರುವ ಕಾರಾಗಿದ್ದು, ಗಾಯಾಳುಗಳು ಹೈದರಾಬಾದ್ ಮೂಲದವರು ಎಂಬ ಮಾಹಿತಿ ಈಗ ಲಭ್ಯವಾಗಿದೆ. 250 ಅಡಿ ಎತ್ತರದಿಂದ ಕಾರು ಬಿದ್ದರೂ ಕೂಡ ಕಾರಿನಲ್ಲಿದ್ದ ಸಣ್ಣ ಮಗು ಸೇರಿ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಷ್ಟು ಎತ್ತರದ ಪ್ರದೇಶದಿಂದ ಬೀಳುವಾಗ ಗುಡ್ಡಗಾಡು ಪ್ರದೇಶದಲ್ಲಿದ್ದ ಮರಗಳು ಹಾಗೂ ಮರದ ರೆಂಬೆ ಕೊಂಬೆಗಳಿಗೆ ಬಡಿದು ನಿಧಾನವಾಗಿ ಕಾರು ಮೇಲಿನಿಂದ ಜಾರಿಕೊಂಡು ಸಾಗಿದೆ. ಹೀಗಾಗಿ ಕಾರು ಎತ್ತರದಿಂದ ಬಿದ್ದರೂ ಕೂಡ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕಾರು ಬಿದ್ದ ಕೂಡಲೇ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಹಾಗೂ ಸ್ಥಳಿಯರು ಭೇಟಿ ನೀಡಿ ಕಾರಿನಲ್ಲಿದ್ದವರನ್ನು ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಾರಾಂತ್ಯದ ಜೊತೆ 3 ದಿನ ರಜೆ ಸಿಕ್ಕ ಪರಿಣಾಮ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಹಾಗೂ ದತ್ತಪೀಠಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಸುಮಾರು 900ಕ್ಕೂ ಅಧಿಕ ಕಾರುಗಳು, 300ಕ್ಕೂ ಅಧಿಕ ಬೈಕು ಹಾಗೂ 80ಕ್ಕೂ ಹೆಚ್ಚು ಟಿಟಿ ವಾಹನಗಳಲ್ಲಿ ಪ್ರವಾಸಿಗರು ಪಶ್ಚಿಮ ಘಟ್ಟಗಳ ತಪ್ಪಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.