ಡೈಲಿ ವಾರ್ತೆ: 22/OCT/2024

ಚಿಕ್ಕಮಗಳೂರಲ್ಲಿ ಭಾರೀ ಮಳೆ:
ಪ್ರವಾಸಿ ತಾಣಗಳಿಗೆ ಬರದಂತೆ ಜನರಿಗೆ ಸೂಚನೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಆಗುತ್ತಿರುವ ಭಾರೀ ಮಳೆಯ ಹಿನ್ನೆಲೆ, ಈ ಭಾಗದ ಪ್ರವಾಸಿ ತಾಣಗಳಿಗೆ ಬರುವ ವಿವಿಧ ಭಾಗಗಳ ಪ್ರವಾಸಿಗರಿಗೆ ಒಂದು ವಾರಗಳ ಕಾಲ ಪ್ರವಾಸ ಮುಂದೂಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಜಿಲ್ಲೆಯಲ್ಲಿ ಒಮ್ಮೆ ಬಿಸಿಲು. ಮತ್ತೊಮ್ಮೆ ಮಳೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಒಟ್ಟಾರೆ ಹಿಂಗಾರು ಮಳೆಯ ಅಬ್ಬರಕ್ಕೆ ಕಾಫಿನಾಡಿನ ಜನ ಕಂಗಾಲಾಗಿದ್ದಾರೆ. ಇದರ ನಡುವೆ ಮಳೆ ಅಬ್ಬರಕ್ಕೆ ಮತ್ತೆ ಬೆಟ್ಟ-ಗುಡ್ಡ-ಧರೆ ಕುಸಿಯುವ ಭೀತಿಯಿಂದ ಜಿಲ್ಲಾಡಳಿತ ಪ್ರವಾಸಿಗರಿಗೆ ಒಂದು ವಾರ ಪ್ರವಾಸ ಮುಂದೂಡುವಂತೆ ಸೂಚಿಸಿದೆ.

ಈಗಾಗಲೇ ಜಿಲ್ಲಾದ್ಯಂತ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಮಾಡಿಸಿದ ಸರ್ವೆಯಲ್ಲಿ ಜಿಲ್ಲೆಯ 88 ಸ್ಥಳಗಳನ್ನ ಡೇಂಜರ್ ಸ್ಪಾಟ್ ಎಂದು ಗುರುತಿಸಲಾಗಿದೆ. ಅದರಲ್ಲಿ ಕರ್ನಾಟಕದ ಎವರ್‌ಗ್ರೀನ್ ಟೂರಿಸ್ಟ್ ಸ್ಪಾಟ್ ಮುಳ್ಳಯ್ಯನಗಿರಿ ಪ್ರದೇಶ ಹಾಗೂ ಕೆಲ ಟ್ರಕ್ಕಿಂಗ್ ಸ್ಪಾಟ್‌ಗಳೂ ಇವೆ. ಇನ್ನೂ ಜಿಲ್ಲಾಡಳಿತ ಮುಂದಿನ ವರ್ಷದ ಮಳೆಗೆ ಕ್ರಮಕೈಗೊಳ್ಳೋಣ ಎಂದುಕೊಂಡಿತ್ತು. ಆದರೆ ಮಳೆ ಕಡಿಮೆಯಾಗದ ಕಾರಣ ಪ್ರವಾಸ ಮುಂದೂಡಿ, ಸ್ಥಳೀಯರು ನದಿ-ಕೆರೆ-ಕಟ್ಟೆ ಬಳಿ ಹೋಗದಂತೆ ಸೂಚನೆ ನೀಡಿದೆ.
ಮಳೆಯಿಂದ ಏಕಾಏಕಿ ಹಳ್ಳಗಳು ಬರ್ತಿಯಾಗುತ್ತಿವೆ. ರಸ್ತೆಗಳು ಜಲಾವೃತವಾಗುತ್ತಿವೆ. ಅವಾಂತರಗಳಾಗುವ ಆತಂಕದಿಂದ ಜಿಲ್ಲಾಡಳಿತ ಪ್ರವಾಸಿಗರಿಗೆ ಈ ಸೂಚನೆ ನೀಡಿದೆ.