ಡೈಲಿ ವಾರ್ತೆ: 28/OCT/2024

ಕುಂದಾಪುರ: ತಾಲೂಕು ಪ್ರೌಢಶಾಲಾ ಮಕ್ಕಳ ಮತ್ತು ಚಿತ್ರಕಲಾ ಶಿಕ್ಷಕರ ಚಿತ್ರಕಲಾ ಪ್ರದರ್ಶನ ಮತ್ತು ಕಾರ್ಯಗಾರದ ಉದ್ಘಾಟನೆ:
ಚಿತ್ರಕಲೆಗೆ ತನ್ನದೇ ಆದಂತಹ ವಿಶಿಷ್ಟ ರೀತಿಯ ಸ್ಥಾನಮಾನಗಳಿವೆ – ಗಣೇಶ್ ಬೀಜಾಡಿ

ಕುಂದಾಪುರ : ಇವತ್ತಿನ ದಿನಗಳಲ್ಲಿ ಚಿತ್ರಕಲೆಗೆ ತನ್ನದೇ ಆದಂತಹ ವಿಶಿಷ್ಟ ರೀತಿಯ ಸ್ಥಾನಮಾನಗಳಿವೆ. ಇಂತಹ ಒಂದು ಚಿತ್ರಕಲೆಗೆ ಕುಂದಾಪುರ ಭಾಗದ ಹಲವಾರು ಗಣ್ಯರು ಚಿತ್ರಕಲೆಗೆ ಕೊಟ್ಟಂತಹ ಕೊಡುಗೆಗಳು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ. ಎಂದು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಣೇಶ್ ಬೀಜಾಡಿ ಹೇಳಿದ್ದಾರೆ.

ಅವರು ಕುಂದಾಪುರ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ನಡೆದ ಕುಂದಾಪುರ ತಾಲೂಕು ಚಿತ್ರಕಲಾ ಶಿಕ್ಷಕರ ಒಕ್ಕೂಟ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಬೋರ್ಡ್ ಹೈ ಸ್ಕೂಲ್ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ನಡೆದ ಕುಂದಾಪುರ ತಾಲೂಕು ಪ್ರೌಢಶಾಲಾ ಮಕ್ಕಳ ಮತ್ತು ಚಿತ್ರಕಲಾ ಶಿಕ್ಷಕರ ಚಿತ್ರಕಲಾ ಪ್ರದರ್ಶನ ಮತ್ತು ಕಾರ್ಯಗಾರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಈಗಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಎನ್ನುವ ವಸ್ತುವಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಮಯವನ್ನು ಕಳೆಯುತ್ತಿರುವುದು ನಮ್ಮ ಕಣ್ಣಮುಂದಿದೆ. ಈ ಒಂದು ಪರಿಸ್ಥಿತಿಯಲ್ಲಿರುವಾಗ, ಶಿಕ್ಷಕರ ಮಾರ್ಗದರ್ಶನದಲ್ಲಿ ಅಚ್ಚುಕಟ್ಟಾಗಿ ಚಿತ್ರ ಬಿಡಿಸುವ ಮೂಲಕ ತಮ್ಮ ವ್ಯಕ್ತಿತ್ವ ವಿಕಸನಗೊಳ್ಳುವುದಕ್ಕೆ ಈ ಒಂದು ಕಾರ್ಯಕ್ರಮ ದಾರಿಯಾಗುತ್ತದೆ ಎಂದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಹೆಚ್. ಶೋಭಾ ಶೆಟ್ಟಿ ವಹಿಸಿದ್ದರು.

ಕುಂದಾಪುರ ಸಂಪನ್ಮೂಲ ಕೇಂದ್ರ ಕ್ಷೇತ್ರ ಸಮನ್ವಯಾಧಿಕಾರಿ ಅಶೋಕ್ ನಾಯಕ್, ಉಡುಪಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ಕಡಬ, ಕುಂದಾಪುರ ತಾಲೂಕು ಚಿತ್ರಕಲಾ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಬಿ. ಪಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿನುತ ಗಾoವ್ಕರ್, ಹವ್ಯಾಸಿ ಚಿತ್ರ ಕಲಾವಿದ ಶಿವಕುಮಾರ್ ಚಿತ್ರದುರ್ಗ, ರಾಘವೇಂದ್ರ ಚಾತ್ರಮಕ್ಕಿ, ರಾಜಶೇಖರ್ ತಾಳಿಕೋಟೆ, ಮೊದಲಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಪ್ರದರ್ಶನಕ್ಕೆ ಇಟ್ಟಿರುವಂತಹ, ಶಿಕ್ಷಕರು ವಿದ್ಯಾರ್ಥಿಗಳು ಬಿಡಿಸಿದಂತಹ ಚಿತ್ರವನ್ನು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಹೆಚ್. ಶೋಭಾ ಶೆಟ್ಟಿ ಹಾಗೂ ಅತಿಥಿ ಗಣ್ಯರಿಂದ ವೀಕ್ಷಿಸಲಾಯಿತು.