ಡೈಲಿ ವಾರ್ತೆ: 29/OCT/2024

ಕಲ್ಲಡ್ಕ ವಲಯ ಮಟ್ಟದ ಪ್ರಾಥಮಿಕ-ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಮಾಣಿ ಬಾಲವಿಕಾಸ ಶಾಲೆಗೆ ಅವಳಿ ಸಮಗ್ರ ಪ್ರಶಸ್ತಿ

ಬಂಟ್ವಾಳ ; ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಬಂಟ್ವಾಳ ಮತ್ತು ಶ್ರೀ ರಾಮಚಂದ್ರ ವಿದ್ಯಾಲಯ ಪೆರ್ನೆ ಇವರ ಸಂಯುಕ್ತ ಆಶ್ರಯದಲ್ಲಿ ಪೆರ್ನೆಯಲ್ಲಿ ನಡೆದ 14 ಮತ್ತು17 ವರ್ಷದ ವಯೋಮಿತಿಯೊಳಗಿನ ಬಾಲಕ ಮತ್ತು ಬಾಲಕಿಯರ ಕಲ್ಲಡ್ಕ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮಾಣಿ ಬಾಲವಿಕಾಸ ಶಾಲೆಗೆ ಅವಳಿ ಸಮಗ್ರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದೆ.

ಸ್ಪರ್ಧೆಯಲ್ಲಿ ಮಾಣಿಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಒಟ್ಟು 55 ಬಹುಮಾನಗಳನ್ನು ಪಡೆದುಕೊಂಡಿದ್ದು, 22 ಪ್ರಥಮ, 22 ದ್ವಿತೀಯ, 11 ತೃತೀಯ ಸ್ಥಾನಗಳನ್ನು ಹೊಂದಿದೆ. 17 ರ ವಯೋಮಾನದ ಪ್ರೌಢಶಾಲಾ ವಿಭಾಗದ ಬಾಲಕಿಯರ ಹಾಗೂ 14ರ ವಯೋಮಾನದ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದ ತಂಡಗಳು ಸಮಗ್ರ ಚಾಂಪಿಯನ್ ಶಿಪ್ ನ್ನು ಪಡೆದುಕೊಂಡಿರುತ್ತದೆ.

17ರ ವಯೋಮಾನದ ಬಾಲಕರ ತಂಡವು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ .

ಪ್ರಾಥಮಿಕ ವಿಭಾಗದಲ್ಲಿ 7ನೇ ತರಗತಿಯ ಮೊಹಮ್ಮದ್ ಫೌಝನ್, 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 8 ನೇ ತರಗತಿಯ ಕೃತಿ ಎನ್. ಪಿ ಹಾಗೂ 17ರ ವಯೋಮಾನದ ಬಾಲಕರ ವಿಭಾಗದಲ್ಲಿ 10 ನೇ ತರಗತಿಯ ಶುಭಂ ಶೆಟ್ಟಿ ವೈಯಕ್ತಿಕ ಚಾಂಪಿಯನ್ ಶಿಪ್ ನ್ನು ಪಡೆದುಕೊಂಡಿರುತ್ತಾರೆ.