ಡೈಲಿ ವಾರ್ತೆ: 01/NOV/2024
ಕೋಟ: ರೈತ ದ್ವನಿ ಮತ್ತು ಮಿಲ್ ಮಾಲಕರ ಸಂಧಾನ ಮತ್ತೆ ವಿಫಲ. ಒಂದೆರಡು ದಿನದಲ್ಲಿ ಮಿಲ್ ಮಾಲಕರೊಂದಿಗೆ ಪೊಲೀಸ್ ಇಲಾಖೆಯ ಸಭೆಗೆ ನಿರ್ಣಯ
ಕೋಟ: ಕೋಟ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಸಂಜೆ ಭತ್ತದ ದರದಲ್ಲಿನ ಪರಿಷ್ಕರಣೆ ಬಗ್ಗೆ ಸಭೆ ನಡೆಯಿತು.
ನವೆಂಬರ್ 4 ರಂದು ಭತ್ತದ ದರ ಹೆಚ್ಚಳಕ್ಕೆ ಆಗ್ರಹಿಸಿ ರೈತ ಧ್ವನಿ ಮಿಲ್ ಎದುರುಗಡೆ ಪ್ರತಿಭಟನೆ ಮಾಡಲು ನಿರ್ಧರಿಸಿತ್ತು. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ರೈತರನ್ನು ಮತ್ತೆ ಮಿಲ್ ಮಾಲಕರನ್ನು ಪೊಲೀಸ್ ಠಾಣೆಯಲ್ಲಿ ಸೌಹರ್ದತೆಯ ಮೂಲಕ ವಿವಾದ ಬಗೆಹರಿಸಿ ಕೊಳ್ಳಲು ಡಿ. ವೈ. ಎಸ್. ಪಿ. ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಸಮಕ್ಷಮ ಮಾತುಕತೆಗೆ ಆಹ್ವಾನಿಸಲಾಗಿತ್ತು.
ಸಭೆಯಲ್ಲಿ ಮಿಲ್ ಮಾಲಕರ ಸಂಘದ ಅಧ್ಯಕ್ಷ ರಮೇಶ್ ನಾಯಕ್ ದರ ಹೆಚ್ಚಿಸುವ ಬಗ್ಗೆ ಅಸಾಯಕತೆ ತೋರಿಸಿದ್ದು ರೈತರನ್ನು ಕೆರಳಿಸಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪೊಲೀಸ್ ಅಧಿಕಾರಿಗಳು ರೈತರನ್ನು ಸಮಾಧಾನಿಸಿ ಒಂದೆರಡು ದಿನದಲ್ಲಿ ಎಲ್ಲಾ ಮಿಲ್ ಮಾಲಕರನ್ನು ಕರೆದು ರೈತರ ಬೇಡಿಕೆಯನ್ನು ಸಾಧ್ಯವಾದಷ್ಟು ಮಟ್ಟದಲ್ಲಿ ಪರಿಹಾರ ಮಾಡಲು ಪ್ರಯತ್ನ ಮಾಡಲಾಗುವುದು ಎನ್ನುವ ಭರವಸೆ ನೀಡಿದ್ದಾರೆ.
ಎರಡು ದಿನದಲ್ಲಿ ಸಮಸ್ಯೆ ಬಗೆಹರಿಯದಿದ್ದಲ್ಲಿ ನಿಗದಿತ ದಿನದಂದು ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ರೈತರು ತಿಳಿಸಿದ್ದಾರೆ.
ಉಡುಪಿ ಪೊಲೀಸ್ ಉಪ ವರಿಷ್ಟಾಧಿಕಾರಿ ಪ್ರಭು ಡಿ. ಟಿ, ಬ್ರಹ್ಮಾವರ ವ್ರತ್ತ ನಿರೀಕ್ಷಿಕರಾದ ದಿವಾಕರ್ ಪಿ. ಎಮ್. ಕೋಟ ಠಾಣಾಧಿಕಾರಿ ರಾಘವೇಂದ್ರ. ಎಸ್, ರೈತ ದ್ವನಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕೋಟ, ಕೃಷಿ ಭೂಮಿ ಸಂರಕ್ಷಣಾ ಸಮಿತಿ ಚಿತ್ರಪಾಡಿ ಕಾರ್ಕಡ ಇದರ ಸದಸ್ಯರು ಉಪಸ್ಥಿತರಿದ್ದರು.