ಡೈಲಿ ವಾರ್ತೆ: ಫೆ./04/2026

ಕಾರ್ಕಳ| ಪ್ರೀತಿ ವಿಚಾರ ಮರೆಮಾಚಿ ಮದುವೆ: ಪತಿ, ಕುಟುಂಬಸ್ಥರ ವಿರುದ್ಧ ಪತ್ನಿಯಿಂದ ದೂರು ದಾಖಲು

ಕಾರ್ಕಳ: ಪ್ರೀತಿ ಸಂಬಂಧದ ವಿಚಾರವನ್ನು ಮರೆಮಾಚಿ ಮದುವೆಯಾಗಿದ್ದು, ನಂತರ ಪತ್ನಿಗೆ ಮೋಸ ಮಾಡಿದ್ದಾರೆ ಎಂಬ ಆರೋಪದ ಮೇಲೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ ತಾಲೂಕು ಈದು ಗ್ರಾಮದ ಅಲಿಮಾರು ಗುಡ್ಡೆಯ ನಿವಾಸಿ ಎ.ಸಿ. ಶರ್ಮಿಳ ಅವರು ನೀಡಿದ ದೂರಿನಂತೆ, ಪುತ್ತೂರು ಗ್ರಾಮದ ಆರ್ಯಾಪು ನಿವಾಸಿ ವಸಂತ ಬಿ ಎಂಬವರೊಂದಿಗೆ 2025ರ ಅಕ್ಟೋಬರ್ 29ರಂದು ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಗುರುಹಿರಿಯರ ಸಮಕ್ಷಮದಲ್ಲಿ ವಿವಾಹವಾಗಿತ್ತು.

ವಿವಾಹದ ಬಳಿಕ ಆರೋಪಿತ ಗಂಡ ಶರ್ಮಿಳರೊಂದಿಗೆ ಕೇವಲ ಒಂದು ವಾರ ಮಾತ್ರ ವಾಸವಿದ್ದು, ಮದುವೆಯ ಮಾತುಕತೆಯ ಸಂದರ್ಭದಲ್ಲಿ ಗಂಡನಿಗೆ ಇನ್ನೊಬ್ಬ ಮಹಿಳೆಯೊಂದಿಗೆ ಪ್ರೀತಿ ಸಂಬಂಧ ಇರುವ ವಿಚಾರವನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ವಿಚಾರ ತಿಳಿದ ಬಳಿಕ ಪರಿಹಾರ ರೂಪದಲ್ಲಿ 6 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದರೂ ಇದುವರೆಗೆ ಯಾವುದೇ ಮೊತ್ತವನ್ನು ಪಾವತಿಸಿಲ್ಲ ಎಂದು ಶರ್ಮಿಳ ಅವರು ದೂರಿದ್ದಾರೆ. ಅಲ್ಲದೆ, ಈ ಪ್ರೀತಿ ಸಂಬಂಧದ ವಿಚಾರ ಗಂಡನ ತಾಯಿ ವಿಮಲ, ಅಣ್ಣ ರಘು, ಅತ್ತಿಗೆ ವಿನೋದ, ಸಹೋದರಿಯರಾದ ಪೂರ್ಣಿಮ ಮತ್ತು ಅಶ್ವಿನಿ, ಭಾವಂದಿರಾದ ಅಶೋಕ ಹಾಗೂ ಸುರೇಶ್ ಅವರಿಗೆ ತಿಳಿದಿದ್ದರೂ, ವಿಷಯವನ್ನು
ಶರ್ಮಿಳ ಅವರಿಗೆ ಹಾಗೂ ಅವರ ಕುಟುಂಬದವರಿಂದ ಮರೆಮಾಚಿ ಮದುವೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 12/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(2), 318(4) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.