ಡೈಲಿ ವಾರ್ತೆ: 01/NOV/2024
ಅಮ್ಮೆಮ್ಮಾರ್ : ಮಾರಕಾಸ್ತ್ರಗಳಿಂದ ದಾಳಿ ಪ್ರಕರಣ, 8 ಮಂದಿ ಆರೋಪಿಗಳ ಬಂಧನ, ಉಳಿದ ಆರೋಪಿಗಳಿಗೆ ಶೋಧ
ಬಂಟ್ವಾಳ : ಪುದು ಗ್ರಾಮದ ಅಮ್ಮೆಮಾರ್ ಎಂಬಲ್ಲಿ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಘಟನೆಗೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೋಲೀಸರ ತಂಡ ಬಂಧಿಸಿದ್ದು, ಉಳಿದಂತೆ ಇನ್ನೂ 6 ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ
ಪೂರ್ವದ್ಚೇಷದ ಹಿನ್ನೆಲೆಯಲ್ಲಿ ಅ.23 ರಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಪರಿಣಾಮ ತಸ್ಲೀಮ್ ಹಾಗೂ ಮಹಮ್ಮದ್ ಶಾಕೀರ್ ಎಂಬವರು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳೀಯ ನಿವಾಸಿಗಳಾದ ಮನ್ಸೂರ್, ಪಲ್ಟಿ ಇಮ್ರಾನ್, ಮುಸ್ತಾಕ್ ಯಾನೆ ಮಿಚ್ಚ, ಸರ್ಪುದ್ದೀನ್, ಅಶ್ರಫ್, ರಿಜ್ವಾನ್, ಸಫ್ವಾನ್, ಅದ್ನಾನ್, ನಿಸಾಕ್, ಯಾಸೀರ್, ಸುಹೈಲ್, ಜಾಹೀದ್, ಸಾದಿಕ್, ಲತೀಫ್ ಎಂಬವರು ಆರೋಪಿಗಳು ಎಂದು ಹೆಸರಿಸಲಾಗಿತ್ತು.
ಇವರ ಪೈಕಿ ಪ್ರಮುಖ ಆರೋಪಿಯಾಗಿರುವ ಮನಸ್ಸೂರ್ ಯಾನೆ ಮಂಚು ಹಾಗೂ ಇವನ ತಂಡದಲ್ಲಿದ್ದ ಮಿಚ್ಚ ಯಾನೆ ಮಿಸ್ತಕ್, ಸರ್ಪುದ್ದೀನ್ ಯಾನೆ ತಾಟು, ರಿಜ್ವಾನ್ ಯಾನೆ ರಿಜ್ಜು, ಅದ್ನಾನ್ ಯಾನೆ ಅದ್ದು, ಸುಹೈಲ್ ಯಾನೆ ಚೋಯಿ, ಜಾಹೀದ್, ಸಾದಿಕ್ ಎಂಬವರನ್ನು ಮುಡಿಪು, ಮಾಣಿ ,ಕಾರ್ಕಳ ಹಾಗೂ ಆಸ್ಪತ್ರೆಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ.
ತಂಡದ ಯುವಕರು ಕತ್ತಿಯನ್ನು ಕೈಯಲ್ಲಿಡಿದು ಝಳಪಿಸುವ ಹಾಗೂ ಹಲ್ಲೆ ನಡೆಸುವ ವಿಡಿಯೋ ದೃಶ್ಯಾವಳಿ ಘಟನೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಐ.ಜಿ.ಮತ್ತು ಎಸ್.ಪಿ.ಬೇಟಿ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿರುವ ಬೆನ್ನಿಗೆ ಪಶ್ಚಿಮ ವಲಯದ ಡಿಐಜಿಪಿ ಅಮಿತ್ ಸಿಂಗ್ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಬೇಟಿ ನೀಡಿ ಇದು ಗಂಭೀರ ಪ್ರಕರಣ ಎಂದು ಪರಿಗಣಿಸಿ, ಆರೋಪಿಗಳ ಶೀಘ್ರ ಪತ್ತೆಗಾಗಿ ಬಂಟ್ವಾಳ ಡಿ.ವೈ.ಎಸ್.ಪಿ.ವಿಜಯಪ್ರಸಾದ್ ನೇತ್ರತ್ವದಲ್ಲಿ ತಂಡವೊಂದನ್ನು ರಚಿಸಲಾಗಿತ್ತು. ಉಳಿದ ಆರೋಪಿಗಳ ಶೋಧ ಕಾರ್ಯ ಮುಂದುವರೆದಿದೆ.