ಡೈಲಿ ವಾರ್ತೆ: 02/NOV/2024
ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ – ಕಾರ್ತಿಕ ಮಾಸದ ಭಜನೆಗೆ ಚಾಲನೆ
ಕೋಟ: ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ವತಿಯಿಂದ ನಡೆಯುವ 22 ನೆಯ ವಷ೯ದ ಕಾರ್ತಿಕ ಮಾಸದ ಭಜನೆಗೆ ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಇದರ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ ಎಸ್ ಕಾರಂತರು ದೀಪ ಬೆಳಗಿಸಿ ಚಾಲನೆ ನೀಡಿದರು. ಇಂದಿನ ಕಾಲಘಟ್ಟದಲ್ಲಿ ತೆರೆಯ ಮರೆಗೆ ಹೋಗುತ್ತಿರುವ ಭಜನಾ ಸಂಕೀರ್ತನೆ ಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ದಿಸೆಯಲ್ಲಿ ಬ್ರಾಹ್ಮಣ ಮಹಾಸಭಾದ ಪ್ರಯತ್ನ ಶ್ಲಾಘನೀಯ, ಹಾಗೂ ನಿತ್ಯ ಬದುಕಿನ ಜಂಜಾಟದಲ್ಲಿ ಮಾನಸಿಕ ಒತ್ತಡ ತಗ್ಗಿಸುವಲ್ಲಿ ಭಜನೆಯಂತಹ ಆಧ್ಯಾತ್ಮಿಕ ಚಟುವಟಿಕೆಗಳ ಪ್ರಾಮುಖ್ಯತೆಯನ್ನು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಭಾದ ಉಪಾಧ್ಯಕ್ಷ ಶ್ರೀ ಪಟ್ಟಾಭಿರಾಮ ಸೋಮಯಾಜಿ ಯವರು ಬ್ರಾಹ್ಮಣ ಮಹಾಸಭಾವು ಕಾರ್ತಿಕ ಮಾಸದ ಎಲ್ಲಾ ದಿನಗಳಲ್ಲಿ ವಲಯದ ಆಯ್ದ ಮಠ ಮಂದಿರಗಳಲ್ಲಿ ಪ್ರತಿದಿನ ಸಂಜೆ ಗಂಟೆ 6 ರಿಂದ 8 ರ ವರೆಗೆ ಭಜನಾ ಸಂಕೀರ್ತನೆ ಯನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ವಲಯದ 10 ಪುರುಷರ ಹಾಗೂ ಮಹಿಳೆಯರ ಭಜನಾ ತಂಡಗಳು ಭಜನೆಯಲ್ಲಿ ಭಾಗವಹಿಸಿದ್ದವು .
ಸಭಾದ ಅಧ್ಯಕ್ಷ ಶ್ರೀ ಯಂ ಶಿವರಾಮ ಉಡುಪ ಸ್ವಾಗತಿಸಿದರು. ಉಪಾಧ್ಯಕ್ಷ ಶ್ರೀ ಪಿ. ಸಿ. ಹೊಳ್ಳ, ಶ್ರೀ ಸುಬ್ರಾಯ ಉರಾಳ, ಕೋಶಾಧಿಕಾರಿ ಶ್ರೀ ಸುಬ್ರಹ್ಮಣ್ಯ ಹೇಳೆ೯, ಶ್ರೀ ರಾಮ ಭಜನಾ ಸಂಘದ ಅಧ್ಯಕ್ಷ ಶ್ರೀ ರಾಮದಾಸ ಅಡಿಗ, ಸೂರ್ಯನಾರಾಯಣ ಅಲ್ಲೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಶ್ರೀ ಕೆ ರಾಜಾರಾಮ ಐತಾಳ ಕಾರ್ಯಕ್ರಮ ನಿವ೯ಹಿಸಿ ವಂದಿಸಿದರು.