

ಡೈಲಿ ವಾರ್ತೆ: 06/NOV/2024



ಕೋಟೇಶ್ವರ: ವಿದ್ಯಾರಣ್ಯ ಶಾಲೆಯಲ್ಲಿ ಸಂಭ್ರಮದ ದೀಪಾವಳಿ ಆಚರಣೆ – ನಮ್ಮ ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸುವುದು ಅತ್ಯಗತ್ಯ- ಪ್ರೊ.ಬಾಲಕೃಷ್ಣ ಶೆಟ್ಟಿ.

ಕುಂದಾಪುರ: ಇಂದು ಶಿಕ್ಷಣ ಸಂಸ್ಥೆಗಳು ದೇಶದ ಭವಿಷ್ಯದ ಭದ್ರ ಬುನಾದಿಗೆ ಕಾರಣವಾಗಿವೆ. ಹೆಚ್ಚು ಹೆಚ್ಚು ಉತ್ತಮ ಶಿಕ್ಷಣ ಸಂಸ್ಥೆಗಳು ಸ್ಥಾಪನೆಗೊಂಡು ಶಿಕ್ಷಣ ಸರ್ವರಿಗೂ ಸಿಗುವಂತಾಗಬೇಕು. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಪೋಷಕರು ಉತ್ತಮ ಶಿಕ್ಷಣ ನೀಡಿದರೆ ಅದುವೇ ಅಮೂಲ್ಯ ಆಸ್ತಿಯಾಗುತ್ತದೆ. ಇಂದಿನ ಯುವ ಪೀಳಿಗೆಗೆ ನಮ್ಮ ನಾಡಿನ ಶ್ರೀಮಂತ ಸಂಸ್ಕೃತಿಯನ್ನು ಪರಿಚಯಿಸುವುದು ಅತ್ಯಗತ್ಯ ಎಂದು ಪ್ರೊ.ಬಾಲಕೃಷ್ಣ ಶೆಟ್ಟಿ ಹೇಳಿದರು.ಅವರು ಕೋಟೇಶ್ವರ ಯಡಾಡಿ- ಮತ್ಯಾಡಿ ಸುಜ್ಞಾನ ಪದವಿಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ದೀಪಾವಳಿ ಸಂಭ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹೆಗ್ಗದ್ದೆ ಸ್ಟುಡಿಯೋ ಯೂಟ್ಯೂಬ್ ಚಾನಲ್ ನ ಸಂದೀಪ್ ಶೆಟ್ಟಿ ಮಾತನಾಡುತ್ತ ” ಮಕ್ಕಳು ಎಳವೆಯಲ್ಲಿಯೇ ಕನಸು ಕಾಣಬೇಕು ಮತ್ತು ನನಸಾಗಿಸಲು ಪ್ರಯತ್ನಿಸಬೇಕು”ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಡಾ.ರಮೇಶ್ ಶೆಟ್ಟಿ ಮಾತನಾಡಿ ಮಕ್ಕಳಿಗೆ ನಮ್ಮ ನಾಡಿನ ಆಚಾರ ವಿಚಾರಗಳನ್ನು ತಿಳಿಸುವುದು ಇಂತಹ ಕಾರ್ಯಕ್ರಮಗಳ ಉದ್ದೇಶ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತುಳಸಿ ಪೂಜೆ, ಬಲಿಂದ್ರ ಪೂಜೆ, ಗೋಪೂಜೆ,ಹಳೆಯ ಕಾಲದ ಪರಿಕರಗಳ ವಸ್ತುಗಳ ಪ್ರದರ್ಶನ,ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಹೆಗ್ಗದ್ದೆ ಸ್ಟುಡಿಯೋ ಯೂಟ್ಯೂಬ್ ಚಾನೆಲ್ ನ ಸಂದೀಪ್ ಶೆಟ್ಟಿ ಅವರನ್ನು ಗೌರವಿಸಲಾಯಿತು.






ಕಾರ್ಯಕ್ರಮದಲ್ಲಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಸುಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಂಜನ್ ಶೆಟ್ಟಿ, ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಉಪಸ್ಥಿತರಿದ್ದರು.
ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಖಜಾಂಚಿ ಭರತ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ರಜತ್ ಭಟ್ ನಿರೂಪಿಸಿದರು.