ಡೈಲಿ ವಾರ್ತೆ: 07/NOV/2024
ಕಿನ್ನಿಗೋಳಿ:ಚಿರತೆ ದಾಳಿಯಿಂದ ವ್ಯಕ್ತಿಯೋರ್ವ ಗಂಭೀರ ಗಾಯ
ಮುಲ್ಕಿ: ಹುಲ್ಲು ಕತ್ತರಿಸುತ್ತಿದ್ದ ವ್ಯಕ್ತಿ ಮೇಲೆ ಚಿರತೆಯೊಂದು ದಾಳಿ ಮಾಡಿ ಗಂಭೀರ ಗಾಯ ಗೊಳಿಸಿದ ಘಟನೆ ನ. 6 ರಂದು ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಕಿನ್ನಿಗೋಳಿ ಸಮೀಪದ ಎಳತ್ತೂರು ದೇವರ ಗುಂಡಿ ಸಂಕದ ಬಳಿ ನಡೆದಿದೆ.
ಚಿರತೆ ದಾಳಿಗೊಳಗಾದ ವ್ಯಕ್ತಿ ಸ್ಥಳೀಯ ನಿವಾಸಿ ಲಿಗೋರಿ (58) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿದ್ದರಿಂದ ಇವರನ್ನು ಕಟೀಲು ಬಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇವರು ಹೈನುಗಾರರಾಗಿದ್ದು, ದನಗಳಿಗೆ ಮೇವು ತರಲು ಹೋದಾಗ ಈ ಘಟನೆ ನಡೆದಿದೆ. ಲಿಗೋರಿರವರು ಧೈರ್ಯದಿಂದ ಚಿರತೆಯನ್ನು ಎದುರಿಸಿದ್ದು ಕೂಡಲೇ ಚಿರತೆ ಸ್ಥಳದಿಂದ ಪಲಾಯನಗೈದಿದೆ.
ಚಿರತೆ ದಾಳಿಯಿಂದ ಲಿಗೋರಿರವರ ಮುಖಕ್ಕೆ, ಕೈಗೆ ಕಾಲಿಗೆ ಸ್ವಲ್ಪ ಗಾಯಗಳಾಗಿದ್ದು ಅಪಾಯದಿಂದ ಪವಾಡಸದೃಶ ಪಾರಾಗಿದ್ದಾರೆ.
ಈ ಭಾಗದಲ್ಲಿ ಕಳೆದ ವಾರದ ಹಿಂದೆ ಕೂಡ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರಾದ ಶಿವಪ್ರಸಾದ್ ಭಟ್ ಎಂಬವರು ಎಚ್ಚರಿಕೆಯಿಂದ ಇರುವಂತೆ ಮಾಹಿತಿ ನೀಡಿದ್ದರು.