ಡೈಲಿ ವಾರ್ತೆ: 10/NOV/2024
ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ನೆಂಪು ಡಾ. ವೆಂಕಟರಾಮ್ ಭಟ್
ಉನ್ನತ ಶಿಕ್ಷಣ ಕ್ಷೇತ್ರದ ಪ್ರತಿಭೆ -ಡಾ. ವೆಂಕಟರಾಮ್ ಭಟ್
ಕೋಟೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರದ ಪ್ರಾಧ್ಯಾಪಕರಾಗಿ ಪ್ರಖ್ಯಾತರಾದ ಡಾ. ವೆಂಕಟರಾಮ್ ಭಟ್ ಅವರು, ಇದೀಗ ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಹೊಸ ಜವಾಬ್ದಾರಿ ಹೊತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅವರ ಸಾಧನೆಗೆ ಗೌರವ ಸೂಚಕವಾಗಿ ಸಹೋದ್ಯೋಗಿಗಳಾದ ಶ್ರೀ ಗಂಗಾರಾಜು, ಪ್ರೊಫೆಸರ್ ಶೇಖರ್ ಬಿ., ಶ್ರೀ ಶ್ರೀಕಾಂತ್, ಶ್ರೀ ರಾಜೇಂದ್ರ, ಶ್ರೀ ಸಂದೇಶ್ ಶೆಟ್ಟಿ, ಶ್ರೀಮತಿ ಶೈಲಜಾ, ಶ್ರೀ ವಿನಯ್ ಅವರು ಸನ್ಮಾನಿಸಿ ಗೌರವಿಸಿದರು.
ಡಾ. ವೆಂಕಟರಾಮ್ ಭಟ್ ಅವರು ಕೇವಲ ವಾಣಿಜ್ಯ ಶಾಸ್ತ್ರದ ಅಧ್ಯಾಪನಕ್ಕೆ ಸೀಮಿತರಾಗಿರದೆ, ಉತ್ತಮ ಆಡಳಿತಗಾರರಾಗಿ, ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗಿ ಮತ್ತು ತರಬೇತುದಾರರಾಗಿಯೂ ಹೆಸರುವಾಸಿಯಾಗಿದ್ದಾರೆ. ಅವರ ವಿದ್ಯಾರ್ಹತೆಗಳ ಪಟ್ಟಿ ಅವರ ಸಾಮರ್ಥ್ಯವನ್ನು ಸಾರುತ್ತದೆ. ವಾಣಿಜ್ಯ ಶಾಸ್ತ್ರದಲ್ಲಿ ಪಿಎಚ್.ಡಿ ಪದವಿ, ಪಿಜಿಡಿಎಚ್‌ಆರ್‌ಎಂ ಮತ್ತು ಪಿಜಿಡಿಎಸ್‌ಬಿಎಸ್‌ಎ ಪದವಿಗಳು ಅವರ ಶೈಕ್ಷಣಿಕ ಹಿನ್ನೆಲೆಯನ್ನು ಬಲಪಡಿಸಿವೆ.
ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಶಿಕ್ಷಕರಾಗಿ ಸಂಶೋಧಕರಾಗಿ ವಿದ್ಯಾರ್ಥಿಗಳನ್ನು ಪ್ರಭಾವಿಸಿದ್ದಾರೆ. ವಾಣಿಜ್ಯ ಶಾಸ್ತ್ರವನ್ನು ವಿದ್ಯಾರ್ಥಿಗಳಿಗೆ ಸರಳವಾಗಿ ಮತ್ತು ಆಸಕ್ತಿದಾಯಕವಾಗಿ ತಿಳಿಸುವಲ್ಲಿ ಅವರು ನಿಪುಣರು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಪ್ರೇರೇಪಿಸುವ ಅವರ ಸಾಮರ್ಥ್ಯ ಅನನ್ಯ. ವಿವಿಧ ಕ್ಷೇತ್ರಗಳಲ್ಲಿ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಿದ್ದಾರೆ. ಶಿಕ್ಷಣ ಕ್ಷೇತ್ರದ ಸಂಘಟಕರಾಗಿ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕಿರಣ ಸಂಘಟಿಸಿರುತ್ತಾರೆ. ಶಂಕರನಾರಾಯಣ ಕಾಲೇಜಿನ ಪ್ರಾಂಶುಪಾಲರಾಗಿ ಅವರು ಕಾಲೇಜಿನ ಸರ್ವತೋಮುಖ ಬೆಳವಣಿಗೆಗೆ ಹೊಸ ಆಯಾಮ ನೀಡುವ ನಿರೀಕ್ಷೆ ಇದೆ.
ಡಾ. ವೆಂಕಟರಾಮ್ ಭಟ್ ಅವರನ್ನು ಸನ್ಮಾನಿಸಿ ಅವರ ವ್ಯಕ್ತಿತ್ವ, ಜ್ಞಾನ, ಕೌಶಲ್ಯ ಮತ್ತು ಕರ್ತವ್ಯನಿಷ್ಠೆಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.