ಡೈಲಿ ವಾರ್ತೆ: 18/NOV/2024

ಕೋಟ ಅಮೃತೇಶ್ವರೀ ಮೇಳ ಪ್ರಥಮ ದೇವರ ಸೇವೆ:
ಉಪ್ಪೂರ ಪುರಸ್ಕಾರ, ಕೋಟ ವೈಕುಂಠ ಪ್ರಶಸ್ತಿ ಪ್ರದಾನ

ಕೋಟ: ಶ್ರೀಕ್ಷೇತ್ರ ಕೋಟ ಅಮೃತೇಶ್ವರೀ ದಶಾವತಾರ ಯಕ್ಷಗಾನ ಮೇಳದ ತಿರುಗಾಟದ
ದೇವರ ಸೇವೆ ಹಾಗೂ ಈ ಸಂದರ್ಭ ನೀಡಲಾಗುವ ನಾರ್ಣಪ್ಪ ಊಪ್ಪೂರ ಪ್ರಶಸ್ತಿ ಮತ್ತು ದಿ. ಕೋಟ
ವೈಕುಂಠ ಪುರಸ್ಕಾರ ಪ್ರದಾನ ಕಾರ್ಯಕ್ರಮ ನ.17 ರಂದು ಕೋಟ ಅಮೃತೇಶ್ವರೀ ದೇಗುಲದಲ್ಲಿ ಜರಗಿತು.

ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಚ್.ಶ್ರೀಧರ ಹಂದೆ ಅವರು 2024ನೇ ಸಾಲಿನ ನಾರ್ಣಪ್ಪ ಊಪ್ಪೂರ ಪ್ರಶಸ್ತಿ
ಸ್ವೀಕರಿಸಿ ಮಾತನಾಡಿ, ಯಕ್ಷಗಾನ ರಂಗದಲ್ಲಿ ಹಿಂದಿನ ಸಂಪ್ರದಾಯಗಳು, ವೇಷಭೂಷಣಗಳು
ಮರೆಯಾಗುತ್ತಿದೆ. ಇದನ್ನು ಸಂಪೂರ್ಣವಾಗಿ ತಿದ್ದಲು ಯಾರಿಂದಲೂ ಸಾಧ್ಯವಿಲ್ಲ. ಆದರೆ
ಕಲೆಗೆ ಗೌರವ ನೀಡುವಷ್ಟರ ಮಟ್ಟಿಗಾದರು ಹಿಂದಿನ ನಡೆಯನ್ನು ಅನುಸರಿಸಬೇಕು.
ಅಮೃತೇಶ್ವರೀ ಮೇಳದ ಇತಿಹಾಸ ಅತ್ಯಂತ ಶ್ರೇಷ್ಠವಾದದ್ದು ಎಂದರು.

ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್ ಮಾತನಾಡಿ, ಯಕ್ಷಗಾನ ಕಲೆಗೆ ಇನ್ನಷ್ಟು ಗೌರವ ಸಿಗಬೇಕಾದರೆ ಯುವ ಕಲಾವಿದರು ಕಲೆಯ ಇತಿಹಾಸವನ್ನು ಅರಿತು ಪಾಲಿಸಬೇಕು. ನಮ್ಮ ಮೇಳದಲ್ಲಿ ತಕ್ಕಮಟ್ಟಿಗೆ ಸಂಪ್ರದಾಯ, ಹಿಂದಿನ ನಡೆಯನ್ನು
ಅನುಸರಿಸಲಾಗುತ್ತಿದೆ ಎನ್ನುವುದು ಖುಷಿಯ ವಿಚಾರ ಎಂದರು.

ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ್ ಶೆಟ್ಟಿ ಮಾತನಾಡಿ, ಯಕ್ಷಗಾನ ಕಲೆಗೆ ಇನ್ನಷ್ಟು ಗೌರವ ತರುವ ಕಾರ್‍ಯವನ್ನು ಅಕಾಡೆಮಿ ಮೂಲಕ ಮಾಡಲಾಗುವುದು ಎಂದರು.
ಸಾಹಿತಿ ಉಪೇಂದ್ರ ಸೋಮಯಾಜಿ ಶುಭಾಶಂಸನೆಗೈದರು. ಯಕ್ಷಗಾನ ಗುರುಗಳಾದ ಪ್ರಸಾದ್ ಮೊಗೆಬೆಟ್ಟು ನಲ್ನುಡಿ ಮಾತನಾಡಿದರು.

ಈ ಸಂದರ್ಭ ಉಮೇಶ್‌ರಾಜ್ ಅವರು ನೀಡುವ ದಿ. ಕೋಟ ವೈಕುಂಠ ಪುರಸ್ಕಾರವನ್ನು ಹಾಲಾಡಿ
ಕೃಷ್ಣ ನಾಯ್ಕ್ ಅವರಿಗೆ ನೀಡಿ ಗೌರವಿಸಲಾಯಿತು. ಜೀವನ್‌ಮಿತ್ರ ಆಂಬ್ಯುಲೆನ್ಸ್ ಚಾಲಕ
ಭರತ್ ಗಾಣಿಗ ಅವರು ಮೇಳಕ್ಕೆ ಎಲ್.ಇ.ಡಿ. ನೇಮ್‌ಬೋರ್ಡ್ ಕೊಡುಗೆಯಾಗಿ ನೀಡಿದರು.
ಬೊಬ್ಬರ್ಯನ ಕಟ್ಟೆ ಗೆಳೆಯರ ವತಿಯಿಂದ ಮೇಳಕ್ಕೆ ಪರಿಕರಗಳನ್ನು ಕೊಡುಗೆ ನೀಡಲಾಯಿತು.
ಸಾಲಿಗ್ರಾಮ ಗುರುನರಸಿಂಹ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್. ಕಾರಂತ,
ಉದ್ಯಮಿ ಉಮೇಶ್‌ರಾಜ್ ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯ ಶಿವ ಪೂಜಾರಿ, ಸುಭಾಶ್ ಶೆಟ್ಟಿ ಗಿಳಿಯಾರು, ರತನ್ ಐತಾಳ ಇದ್ದರು.
ದೇಗುಲದ ಪ್ರಬಂಧಕ ಗಣೇಶ್ ಹೊಳ್ಳ ಸ್ವಾಗತಿಸಿ, ವ್ಯವಸ್ಥಾಪನ ಸಮಿತಿ ಸದಸ್ಯ ಚಂದ್ರ
ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಗಣೇಶ್ ನೆಲ್ಲಿಬೆಟ್ಟು ವಂದಿಸಿದರು.