ಡೈಲಿ ವಾರ್ತೆ: 20/NOV/2024

ದಿನಸಿಗೆಂದು ಬಂದಿದ್ದ 61 ಪ್ರಕರಣಗಳ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂಗೌಡ ಉಡೀಸ್: ಎನ್‌ಕೌಂಟರ್‌ಗೂ ಮುನ್ನ ಪೊಲೀಸರಿಂದ ಮನೆಯವರ ಶಿಫ್ಟ್ – ಮರಣೋತ್ತರ ಪರೀಕ್ಷೆ ಬಳಿಕ ಇಂದು ಮೃತದೇಹ ಹಸ್ತಾಂತರ

ಹೆಬ್ರಿ: ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಡೆದ ರಣರೋಚಕ ಕಾರ್ಯಚರಣೆಯಲ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂಗೌಡ ಹತನಾಗಿದ್ದಾನೆ. ಈ ರೋಚಕ ಕಾರ್ಯಾಚರಣೆಗೆ ಪೊಲೀಸರು ಸುಮಾರು ಒಂದು ತಿಂಗಳ ಹೋಂವರ್ಕ್ ಮಾಡಿದ್ದರು. ಕಂಪ್ಲೀಟ್ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ನಿಗ್ರಹದಳ, ಆತ ಬರುವ ಮೊದಲೇ ಮನೆಯನ್ನು ಹೊಕ್ಕಿ ಕುಳಿತಿತ್ತು.

ಸೋಮವಾರ ರಾತ್ರಿ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆ ಪೇಟೆಯಿಂದ ಸುಮಾರು 10 ಕಿ.ಮೀ ದೂರದ ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳ ಗಡಿಯಾಗಿರುವ ಪೀತಬೈಲು ದಟ್ಟ ಕಾಡಂಚಿನಲ್ಲಿ ಈ ಕಾರ್ಯಾಚರಣೆ ನಡೆದಿದೆ. ನಕ್ಸಲ್ ಹಾಗೂ ಪೊಲೀಸರ ನಡುವಿನ ಗುಂಡಿನ ಚಕಮಕಿಯಲ್ಲಿ 61 ಪ್ರಕರಣಗಳಲ್ಲಿ ಬೇಕಾಗಿದ್ದ ನಕ್ಸಲ್ ನಾಯಕ ವಿಕ್ರಂಗೌಡನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಈತನ ತಲೆಗೆ ಕರ್ನಾಟಕ ಸರ್ಕಾರ 5 ಲಕ್ಷ ರೂ. ಬಹುಮಾನ ಘೋಷಿಸಿತ್ತು.

ಹೆಬ್ರಿ ತಾಲೂಕು ಬಚ್ಚಪ್ಪು ಪೀತಬೈಲ್‌ನಲ್ಲಿ ನಾರಾಯಣ, ಜಯಂತ, ಸುಧಾಕರ ಎಂಬವರ ಮನೆಯಿದೆ. ನವೆಂಬರ್ 11ರಂದು ಬಂದು ರೇಷನ್ ತೆಗೆದಿರಿಸುವಂತೆ ನಕ್ಸಲ್ ಟೀಂ ತಾಕೀತು ಮಾಡಿತ್ತು. ರೇಷನ್ ಪಡೆಯಲು ಸೋಮವಾರ ಬರುವುದಾಗಿ ನಕ್ಸಲ್ ಟೀಂ ತಿಳಿಸಿತ್ತು. ವಾರದ ಹಿಂದೆಯೂ ಪೀತಬೈಲು ಮಲೆಕುಡಿಯರಿಂದ ಅಕ್ಕಿ, ಬೇಳೆ ಸಂಗ್ರಹಿಸಿತ್ತು ಎಂಬ ಮಾಹಿತಿ ದೊರೆತಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಎಎನ್‌ಎಫ್ ಯೋಧರು ಆ ಮನೆಯವರನ್ನು ತೆರವುಗೊಳಿಸಿ ಆ ಪ್ರದೇಶದಲ್ಲಿ ಕಾದು ಕುಳಿತಿದ್ದರು. ವಿಕ್ರಂಗೌಡ ಮತ್ತು ತಂಡ ಮನೆಯ ಅಂಗಳಕ್ಕೆ ಬರುತ್ತಿದ್ದಂತೆ ಪೊಲೀಸರು ಶರಣಾಗುವಂತೆ ಕೇಳಿದ್ದಾರೆ. ಪೊಲೀಸರನ್ನು ಕಂಡು ವಿಕ್ರಂ ಬಂದೂಕು ತೆಗೆದಿದ್ದಾನೆ. ಈ ವೇಳೆ ವಿಕ್ರಂ ತಂಡ ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ವಿಕ್ರಂಗೌಡನ ಎದೆಗೆ 3 ಗುಂಡುಗಳು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ತಂಡದ ಸದಸ್ಯರು ಕತ್ತಲಲ್ಲಿ ಕಾಡಿನೊಳಗೆ ಪರಾರಿಯಾಗಿದ್ದಾರೆ. ಮಂಗಳವಾರ ಇಡೀ ರಾತ್ರಿ ಕೂಂಬಿಂಗ್ ನಡೆಸಿದರೂ ತಪ್ಪಿಸಿಕೊಂಡ ನಕ್ಸಲರ ಸುಳಿವು ಪತ್ತೆಯಾಗಿಲ್ಲ.

ಸುಮಾರು 20 ಗಂಟೆಗಳ ಪೊಲೀಸರ ಮಹಜರು ಪ್ರಕ್ರಿಯೆ ಮತ್ತಿತರ ದಾಖಲೆಗಳ ಸಂಗ್ರಹದ ಬಳಿಕ ವಿಕ್ರಂಗೌಡ ಮೃತ ದೇಹವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಯಿತು. ನ್ಯಾಯಾಧೀಶರ ಸಮ್ಮುಖದಲ್ಲಿ ಮಹಜರು ನಡೆಸಿ, ಕುಟುಂಬಕ್ಕೆ ಇಂದು ಮೃತದೇಹ ಹಸ್ತಾಂತರ ಆಗಲಿದೆ. ಘಟನಾ ಸ್ಥಳಕ್ಕೆ ಬೆಂಗಳೂರಿನಿಂದ ಎಫ್‌ಎಸ್‌ಎಲ್ ತಂಡ ಬಂದು ಮಹತ್ವದ ದಾಖಲೆಗಳನ್ನು ಪರಿಶೀಲನೆ ಮಾಡಲಿದೆ. ಮರಣೋತ್ತರ ಪರೀಕ್ಷೆ ನಡೆದ ನಂತರ ಪ್ರಕರಣದ ಖಚಿತ ಮಾಹಿತಿಗಳು ಲಭ್ಯವಾಗಲಿದೆ.