ಡೈಲಿ ವಾರ್ತೆ:02/DEC/2024
ಗಂಟಲಲ್ಲಿ ಬಲೂನ್ ಸಿಲುಕಿ 13 ವರ್ಷದ ಬಾಲಕ ಸಾವು
ಉತ್ತರ ಕನ್ನಡ: ಮನೆಯಲ್ಲಿ ಆಟವಾಡುತ್ತಾ ಬಲೂನ್ ಊದಲು ಹೋಗಿ ಗಂಟಲಲ್ಲಿ ಸಿಲುಕಿ 13 ವರ್ಷದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕ ನವೀನ ನಾರಾಯಣ ಬೆಳಗಾಂವಕರ್ (13) ಎಂದು ತಿಳಿದು ಬಂದಿದೆ.
ಈತ ಜೋಗನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯಾಗಿದ್ದು. ಮನೆಯಲ್ಲಿ ಆಟವಾಡುತಿದ್ದ ವೇಳೆ ಬಲೂನ್ ಊದುವಾಗ ಬಾಯಿಯ ಒಳಗೆ ಜಾರಿ ಹೋಗಿ ಗಂಟಲಲ್ಲಿ ಸಿಲುಕಿಕೊಂಡಿದೆ.
ಗಂಟಲಲ್ಲಿ ಬಲೂನ್ ಸಿಲುಕಿ ಉಸಿರುಗಟ್ಟಿ ಒದ್ದಾಡುತಿದ್ದ ಈತನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ಉಸಿರಾಟವಾಡಲು ಸಾಧ್ಯವಾಗದೇ ಕೊನೆಯುಸಿರೆಳೆದಿದ್ದಾನೆ.
ಹಳಿಯಾಳದ ಸರ್ಕಾರಿ ಆಸ್ಪತ್ರೆ ವೈದ್ಯರು ಗಂಟಲಲ್ಲಿ ಸಿಲುಕಿದ್ದ ಬಲೂನ್ನನ್ನು ತೆಗೆದಿದ್ದಾರೆ. ಆದರೆ ಆ ಬಾಲಕ ಆಸ್ಪತ್ರೆ ಕರೆತರುವ ವೇಳೆಯೇ ದುರಂತ ಸಾವು ಕಂಡಿದ್ದಾನೆ. ಈ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.