ಡೈಲಿ ವಾರ್ತೆ:06/DEC/2024
ಯು.ಬಿ.ಎಂ.ಸಿ. ಇಂಗ್ಲೀಷ್ ಮೀಡಿಯಂ ಸ್ಕೂಲ್ ಹಾಗೂ ಸಿ.ಎಸ್.ಐ ಕೃಪ ವಿದ್ಯಾಲಯ ಕುಂದಾಪುರ ಇದರ 12ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮ
ಕುಂದಾಪುರ: ಯು.ಬಿ.ಎಂ.ಸಿ. ಇಂಗ್ಲೀಷ್ ಮೀಡಿಯಂ ಸ್ಕೂಲ್ ಹಾಗೂ ಸಿ.ಎಸ್.ಐ ಕೃಪ ವಿದ್ಯಾಲಯ ಕುಂದಾಪುರ ಇದರ 12ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮವು ಡಿ. 5 ರಂದು ಗುರುವಾರ ಸಂಜೆ ಶಾಲಾ ಮೈದಾನದಲ್ಲಿ ನಡೆಯಿತು.
ಸಂಸ್ಥೆಯ ಅಧ್ಯಕ್ಷರಾದ ರೆವೆರಂಡ್ ಫಾದರ್ ಐವನ್ ಡಿಸೋಜಾ ಅವರು ಕಾರ್ಯಕ್ರಮವನ್ನು ದ್ವೀಪ ಬೆಳಗಿಸಿ ಉದ್ಘಾಟಿಸಿದರು.
ಕುಂದಾಪುರ ಸಿಎಸ್ಐ ಕೃಪ ವಿದ್ಯಾಲಯ ಚರ್ಚ್ ನ ಸಭಾಪಾಲಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರೆವರೆಂಡ್ ಇಮ್ಮಾನುವೇಲ್ ಜಯಕರ್ ಆಶೀರ್ವಚನ ಮಾಡಿದರು.
ಅವರು ಮಾತನಾಡಿ ಪ್ರತಿಯೊಂದು ಮಗುವಿನಲ್ಲಿಯೂ ಸುಪ್ತ ಪ್ರತಿಭೆ, ಸೃಜನಶೀಲತೆ ಇರುತ್ತದೆ. ಆರಂಭದ ಹಂತದಲ್ಲಿ ತಂದೆ ತಾಯಿ, ನಂತರ ಶಿಕ್ಷಕರು ಇದನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು. ಮಗುವಿನ ಸಾಮರ್ಥ್ಯ, ಗುರಿಯನ್ನು ಅರಿತುಕೊಂಡು ಪ್ರೋತ್ಸಾಹಿಸಿದಾಗ, ಮುಂದೆ ಆ ಮಗು ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯವಾಗುತ್ತದೆ. ಮಕ್ಕಳ ಕಲಿಕೆಯ ಹಂತದಲ್ಲಿ ಅವರ ಮೇಲೆ ಸೂಕ್ತ ನಿಗಾವಹಿಸಿ ಮಾರ್ಗದರ್ಶನ ನೀಡಬೇಕು ಎಂದು ಫಾದರ್
ಇಮ್ಮಾನುವೇಲ್ ಜಯಕರ್ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಹೋಬಳಿಯ ಶಿಕ್ಷಣ ಇಲಾಖೆ ನಿರ್ದೇಶಕರಾದ ಶೇಖರ್ ಪಡುಕೋಣೆ, ಕುಂದಾಪುರ ಪುರಸಭೆ ಸದಸ್ಯೆ ಶ್ರೀಮತಿ ಪ್ರಭಾವತಿ ಶೆಟ್ಟಿ, ಯು.ಬಿ.ಎಂ.ಸಿ. ಸಂಸ್ಥೆಯ ಪ್ರಿನ್ಸಿಪಾಲ್ ಶ್ರೀಮತಿ ಅನಿತಾ ಆಲಿಸ್ ಡಿಸೋಜ, ಸಿ.ಎಸ್.ಐ. ಕೃಪ ವಿದ್ಯಾಲಯದ ಮುಖ್ಯೋಪಾಧ್ಯಾಯನಿ ಶ್ರೀಮತಿ ಸವಿತಾ ಹಾಗೂ ವಿದ್ಯಾರ್ಥಿ ನಾಯಕ ಮಾಸ್ಟರ್ ವಿಸ್ಮಿತ್ ಉಪಸ್ಥಿತರಿದ್ದರು.
ಸಂಸ್ಥೆಯ ಸಂಚಾಲಕರಾದ ಶ್ರೀಮತಿ ಐರೆನ್ ಸಾಲಿನ್ಸ್ ಅವರು ಸ್ವಾಗತಿಸಿದರು.
ವಿದ್ಯಾರ್ಥಿನಿ ಕುಮಾರಿ ಪ್ರಣತಿ ನಿರೂಪಿಸಿದರು.
ಶಿಕ್ಷಕಿ ಶ್ರೀಮತಿ ಪವಿತ್ರ ವಂದಿಸಿದರು.