ಡೈಲಿ ವಾರ್ತೆ:07/DEC/2024
ಎಪಿಕೆ ಫೈಲ್ ಕಳುಹಿಸಿ ಮಂಗಳೂರು ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆ – ದೆಹಲಿಯಲ್ಲಿ ಆರೋಪಿ ಬಂಧನ
ಮಂಗಳೂರು:ಎಪಿಕೆ ಫೈಲ್ ಕಳುಹಿಸಿ ಮಂಗಳೂರಿನ ವ್ಯಕ್ತಿಯೊಬ್ಬರಿಗೆ 1.31 ಲಕ್ಷ ರೂ. ವಂಚಿಸಿದ ಆರೋಪಿಯನ್ನು ಸಿಇಎನ್ ಕ್ರೈಂ ಠಾಣೆ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ.
ದೆಹಲಿಯ ಮಾಳ್ವವಿಯಾ ನಗರದ ಪಂಚಶೀಲ ವಿಹಾರದ ಗೌರವ್ ಮಕ್ವಾನ್ (25) ಬಂಧಿತ ಆರೋಪಿ.
ಆರೋಪಿಯು ಯದುನಂದನ್ ಎಂಬವರ ವಾಟ್ಸ್ಆ್ಯಪ್ಗೆ VAHAN PARIVAHAN.apk ಫೈಲ್ ಕಳುಹಿಸಿದ್ದ. ಆದರೆ, ಫೈಲ್ ಡೌನ್ಲೋಡ್ ಮಾಡುತ್ತಿದ್ದಂತೆ ಯದುನಂದನ್ ಅವರ ಪ್ಲಿಪ್ ಕಾರ್ಟ್ ಖಾತೆ ಹ್ಯಾಕ್ ಆಗಿತ್ತು. ಬಳಿಕ, ಸೈಬರ್ ವಂಚಕರು ಪ್ಲಿಪ್ ಕಾರ್ಟ್ ಖಾತೆ ಬಳಸಿಕೊಂಡು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಿಂದ 1,31,000 ರೂ. ಮೌಲ್ಯದ ಎರಡು ಮೊಬೈಲ್ ಫೋನ್, 1 ಏರ್ಪಾಡ್ ಹಾಗೂ ಗಿಫ್ಟ್ ವೋಚರ್ಗಳನ್ನು ಖರೀದಿ ಮಾಡಿದ್ದರು. ಈ ಬಗ್ಗೆ ವಂಚನೆಗೊಳಗಾದವರು ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ಕೈಗೊಂಡ ಪೊಲೀಸರು, ಪ್ಲಿಪ್ ಕಾರ್ಟ್ ಕಂಪನಿಯಿಂದ ಮಾಹಿತಿ ಸಂಗ್ರಹಿಸಿ, ಪ್ರಕರಣ ದಾಖಲಾದ 48 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ. ಸಿಇಎನ್ ಕ್ರೈಂ ಪೊಲೀಸ್ ಠಾಣಾ ಪಿಎಸ್ಐ ಗುರಪ್ಪ ಕಾಂತಿ ಹಾಗೂ ಪಿಸಿ ತಿಪ್ಪಾರೆಡ್ಡಿ ದೆಹಲಿಗೆ ವಿಶೇಷ ಕರ್ತವ್ಯದಲ್ಲಿ ತೆರಳಿ ಆರೋಪಿಯನ್ನು ಬಂಧನ ಮಾಡಿದ್ದಾರೆ.
ಆರೋಪಿಯಿಂದ ಪ್ರಕರಣಕ್ಕೆ ಸಂಬಂಧಿಸಿದ ಎರಡು ಅಂಡ್ರಾಯ್ಡ್ ಫೋನ್ ಸೇರಿದಂತೆ ಐದು ಐಪೋನ್-15, ಎರಡು ಏರ್ಪ್ಯಾಡ್ ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಸೇರಿದಂತೆ ಒಟ್ಟು 4 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.