ಡೈಲಿ ವಾರ್ತೆ:20/DEC/2024

ಸಿ.ಟಿ ರವಿ ಪ್ರಕರಣ ಬೆಂಗಳೂರಿಗೆ ಶಿಫ್ಟ್‌: ಬೆಳಗಾವಿ ಕೋರ್ಟ್‌ ಆದೇಶ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಸಂವಿಧಾನಿಕ ಪದಬಳಕೆ ಆರೋಪ ಪ್ರಕರಣದಲ್ಲಿ ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ ಜಾಮೀನು ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಕೋರ್ಟ್‌ ಆದೇಶ ಪ್ರಕಟಿಸಿದೆ.

ಸಿ.ಟಿ ರವಿ ಅವರನ್ನ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಬೆಳಗಾವಿ 5ನೇ ಜೆಎಂಎಫ್‌ಸಿ ಕೋರ್ಟ್‌ನ ನ್ಯಾಯಾಧೀರಾದ ಸ್ಪರ್ಶಾ ಡಿಸೋಜಾ ಅವರು ಆದೇಶಿಸಿದ್ದಾರೆ. ಅದರಂತೆ ಟ್ರಾಂಜಿಟ್ ವಾರೆಂಟ್ ಮೇಲೆ ಪೊಲೀಸರು ಸಿ.ಟಿ ರವಿ ಅವರನ್ನ ಕರೆತರಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಹಿರೇಬಾಗೇವಾಡಿ ಪೊಲೀಸರು ಇಂದು ಬೆಳಗ್ಗೆ ಬೆಳಗಾವಿ ಕೋರ್ಟ್‌ಗೆ ಸಿ.ಟಿ ರವಿ ಅವರನ್ನು ಹಾಜರುಪಡಿಸಿದ್ದರು. ಈ ವೇಳೆ ವಕೀಲರು ಜಾಮೀನು ನೀಡುವಂತೆ ಮನವಿ ಮಾಡಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ಕೋರ್ಟ್‌ ಆದೇಶ ಕಾಯ್ದಿರಿಸಿತ್ತು. ತನಿಖಾಧಿಕಾರಿಗಳು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಕರೆದೊಯ್ಯಲು ಅನುಮತಿ ನೀಡುವಂತೆ ಮನವಿ ಮಾಡಿದ್ರು. ಅದಕ್ಕೆ ಕೋರ್ಟ್‌ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.

ಬೆಳಗಾವಿ ಕೋರ್ಟ್‌ನಿಂದ ಬೆಂಗಳೂರು ತಲುಪುವ ಅವಧಿ ಹೊರತುಪಡಿಸಿ, ಬೆಂಗಳೂರು ತಲುಪಿದ ಕೂಡಲೇ ಜನ ಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರು ಪಡಿಸಲು ಸೂಚನೆ ನೀಡಲಾಗಿದೆ. ಅಲ್ಲದೇ ಯಾವುದೇ ರೀತಿಯ ತೊಂದರೆ ಆಗದಂತೆ ಎಚ್ಚರವಹಿಸುವಂತೆಯೂ ಕೋರ್ಟ್‌ ತಾಕೀತು ಮಾಡಿದೆ.