ಡೈಲಿ ವಾರ್ತೆ:25/DEC/2024
ಅಸಲಿ ಚಿನ್ನದ ನಾಣ್ಯವೆಂದು ನಕಲಿ ಚಿನ್ನದ ನಾಣ್ಯ ಕೊಟ್ಟು ಲಕ್ಷಾಂತರ ರೂ ವಂಚನೆ
ದೊಡ್ಡಬಳ್ಳಾಪುರದ ವ್ಯಕ್ತಿಗೆ ರಾಣೆಬೆನ್ನೂರಿನ ವ್ಯಕ್ತಿ ಆಯನೂರಿನಲ್ಲಿ ಚಿನ್ನದ ನಾಣ್ಯದ ಕಥೆಗಳನ್ನ ಕಟ್ಟಿ ವಂಚಿಸಿದ ಘಟನೆ ಶಿವಮೊಗ್ಗದ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೊಡ್ಡಬಳ್ಳಾಪುರದ ನಂದಿಗುಂದ ಗ್ರಾಮದ ಬಾಯಣ್ಣ ಎಂಬ ವ್ಯಕ್ತಿ ಕುಟುಂಬ ಸಮೇತರಾಗಿ ಡಿ.13 ರಂದು ಧರ್ಮಸ್ಥಳಕ್ಕೆ ಹೋದಾಗ ರಾಣೆಬೆನ್ನೂರಿನ ರಾಮಣ್ಣ ಎಂಬ ವ್ಯಕ್ತಿ ಪರಿಚಯವಾಗುತ್ತಾನೆ. ಇಬ್ಬರು ಮೊಬೈಲ್ ನಂಬರ್ ನ್ನ ಎಕ್ಸಚೇಂಜ್ ಮಾಡಿಕೊಂಡಿರುತ್ತಾರೆ. ಊರಿಗೆ ಹೋದ ಮೇಲೆ ಕರೆ ಮಾಡುವುದಾಗಿ ರಾಮಣ್ಣ ಬಾಯಣ್ಣನಿಗೆ ಹೇಳಿರುತ್ತಾರೆ.
ಬಾಯಣ್ಣ ದೊಡ್ಡಬಳ್ಳಾಪುರಕ್ಕೆ ಹೋಗಿ ಮೂರೇದಿನಕ್ಕೆ ರಾಮಣ್ಣ ಕರೆ ಮಾಡಿ ನಮಗೆ ಮನೆಯಿಲ್ಲ ಮನೆ ಕಟ್ಟಿಸುತ್ತಿದ್ದೇವೆ. ನಮಗೆ ಹಣದ ಅವಶ್ಯಕತೆ ಇದೆ. ನನ್ನ ಬಳಿ ಚಿನ್ನದ ನಾಣ್ಯವಿದೆ. ಅದನ್ನ ಪರಶೀಲಿಸಿ ಕೊಂಡು ಹಣ ಕೊಡಿ. ಅದಕ್ಕೆ ನೀವು ಒಮ್ಮೆ ಇಲ್ಲಿಗೆ ಬನ್ನಿ ಚಿನ್ನದ ನಾಣ್ಯ ಕೊಡುವೆ ಎಲ್ಲಿಬೇಕಾದರೂ ಪರೀಕ್ಷಿಸಿಕೊಳ್ಳಿ ಎಂದು ಹೇಳಿದ್ದಾನೆ.
ಇದಕ್ಕಾಗಿ ಹೊನ್ನಾಳಿ ಬಸ್ ನಿಲ್ದಾಣಕ್ಕೆ ಬನ್ನಿ ಚಿನ್ನದ ನಾಣ್ಯ ಕೊಡುವೆ ಎಂದು ರಾಮಣ್ಣ ಹೇಳಿದ್ದಾನೆ. ಮರುದಿನವೇ ಬಾಯಣ್ಣ ಹೊನ್ನಾಳಿ ಬಸ್ ನಿಲ್ದಾಣಕ್ಕೆ ಬಂದಿದ್ದು ಆತನಿಗೆ ಚಿನ್ನದ ನಾಣ್ಯವನ್ನ ರಾಮಣ್ಣ ನೀಡಿದ್ದಾನೆ. ಇದನ್ನ ತೆಗೆದುಕೊಂಡು ಬಾಯಣ್ಣ ದೊಡ್ಡಬಳ್ಳಾಪುರದಲ್ಲಿ ಪರಿಶೀಲಿಸಿದಾಗ ನಾಣ್ಯ ಒರ್ಜಿನಲ್ ಬಂಗಾರ ಎಂದು ತಿಳಿದು ಬಂದಿದೆ.
ಮರುದಿನ ರಾಮಣ್ಣ ಕರೆ ಮಾಡಿದಾಗ ಸರಿಯಾಗಿದೆ ಇಂತಹದ್ದೇ ನಾಣ್ಯ ಕೊಡಬೇಕು ಎಂದಿದ್ದಾರೆ ಬಾಯಣ್ಣ. ನಿಮಗೆ ಎಷ್ಟು ಹಣದ ನಾಣ್ಯ ಬೇಕು ಎಂದಾಗ 4 ಲಕ್ಷ ದ ನಾಣ್ಯ ಬೇಕು ಎಂದಿದ್ದಾರೆ ಬಾಯಣ್ಣನಿಗೆ 10 ಸಾವಿರ ಕಮಿಷನ್ ಹಣದ ಜೊತೆ 4,10,000 ರೂ ತರಲು ಸೂಚಿಸಿದ್ದಾನೆ.
ಬಾಯಣ್ಣ ಮಗನೊಂದಿಗೆ ಶಿವಮೊಗ್ಗಕ್ಕೆ ಬಂದಿದ್ದು ಅವರಿಗೆ ಖಾಸಗಿ ಬಸ್ ಮೂಲಕ ಆಯನೂರು ಬಳಿಗೆ ಬರಲು ಹೇಳಿ ಅಲ್ಲಿ ರಾಮಣ್ಣ ಮತ್ತೋರ್ವನೊಂದಿಗೆ ಪ್ರತ್ಯಕ್ಷನಾಗಿ ಚಿನ್ನದ ಗಂಟನ್ನ ಇಟ್ಟಿದ್ದಾನೆ. ಬೇಗ ಹಣಕೊಡಿ ಎಂದು ಟವೆಲ್ ಹಾಸಿದ್ದಾನೆ. ನಾಲ್ಕು ಲಕ್ಷದ 10 ಸಾವಿರ ರೂ. ಹಣ ಕೊಡುತ್ತಿದ್ದಂತೆ ಶಿವಮೊಗ್ಗಕ್ಕೆ ಹೋಗಿ ಪರಿಶೀಲಿಸಿಕೊಳ್ಳಿ ಎಂದು ಹೇಳಿ ರಾಮಣ್ಣ ಮತ್ತು ಇನ್ನೋರ್ವ ಪರಾರಿಯಾಗಿದ್ದಾರೆ.
ಅನುಮಾನ ಪಟ್ಟ ಬಾಯಣ್ಣಕಲ್ಲಿಗೆ ಉಜ್ಜಿ ನೋಡಿದಾಗ ಎಲ್ಲಾ ನಾಣ್ಯಗಳು ನಕಲಿ ಎಂದು ತಿಳಿದು ಬಂದಿದೆ. ಬಾಯಣ್ಣನ ಮಗ ಓಡಿ ಹೋಗಿ ಹುಡುಕಿದರು ರಾಮಣ್ಣನ ಗ್ಯಾಂಗ್ ಎಸ್ಕೇಪ್ ಆಗಿದೆ. ಬಾಯಣ್ಣ ಕರೆ ಮಾಡಿ ನಾಣ್ಯಗಳು ನಕಲಿ ಎಂದಾಗ ಶಿವಮೊಗ್ಗಕ್ಕೆ ಬರಲು ಹೇಳಿದ್ಸಾನೆ. ಶಿವಮೊಗ್ಗಕ್ಕೆ ಬಂದ ಬಾಯಣ್ಣ ಮತ್ತೆ ಕರೆ ಮಾಡಲು ಯತ್ನಿಸಿದಾಗ ಮೊಬೈಲ್ ಸ್ವಿಚ್ ಆಫ್ ಬಂದಿದೆ. ಕುಂಸಿ ಠಾಣೆಗೆ ಬಂದು ಬಾಯಣ್ಣ ವಂಚನೆಯ ಘಟನೆಯನ್ನ ದೂರು ದಾಖಲಿಸಿದ್ದಾರೆ.