ಡೈಲಿ ವಾರ್ತೆ:27/DEC/2024

ಟೀ ಕುಡಿಯಲು ಮನೆಗೆ ಆಹ್ವಾನಿಸಿ ವ್ಯಕ್ತಿಯ ಸುಲಿಗೆ ಮಾಡಿದ ಸುಂದರಿ & ಗ್ಯಾಂಗ್ – ಮೂವರು ಆರೋಪಿಗಳ ಬಂಧನ

​ಬೆಂಗಳೂರು: ಪರಿಚಿತ ಮಹಿಳೆ ಕರೆದಳೆಂದು ಮನೆಗೆ ಹೋದ ವ್ಯಕ್ತಿಯನ್ನು ಬೆದರಿಸಿ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

57 ವರ್ಷದ ಸಿವಿಲ್ ಕಾಂಟ್ರಾಕ್ಟರ್ ಒಬ್ಬರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂತೋಷ್, ಅಜಯ್ ಹಾಗೂ ಜಯರಾಜ್ ಎಂಬಾತನನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ನಯನಾ ಎಂಬಾಕೆಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ದೂರುದಾರ ವ್ಯಕ್ತಿಗೆ 5 – 6 ತಿಂಗಳುಗಳ ಹಿಂದಷ್ಟೆ ಪರಿಚಯವಾಗಿದ್ದ ನಯನಾ ಆಗಾಗ ತನ್ನ ಮಗುವಿಗೆ ಹುಷಾರಿಲ್ಲವೆಂದು 4 – 5 ಸಾವಿರ ರೂ. ಹಣ ಪಡೆದುಕೊಳ್ಳುತ್ತಿದ್ದಳು. ಆಗಾಗ ಮನೆಗೆ ಬನ್ನಿ ಎಂದು ನಯನಾ ಕರೆಯುತ್ತಿದ್ದಳಾದರೂ ದೂರುದಾರ ವ್ಯಕ್ತಿ ಹೋಗಿರಲಿಲ್ಲ.
ಡಿಸೆಂಬರ್ 9 ರಂದು ಮಾಗಡಿ ರಸ್ತೆಯ ತುಂಗಾನಗರ ಕ್ರಾಸ್ ಬಳಿ ದೂರುದಾರನಿಗೆ ಎದುರಾಗಿದ್ದ ನಯನಾ, “ನಮ್ಮ ಮನೆ ಸಮೀಪದಲ್ಲಿಯೇ ಇದೆ, ಟೀ ಕುಡಿದು ಹೋಗುವಿರಂತೆ ಬನ್ನಿ” ಎಂದು ಆಹ್ವಾನಿಸಿದ್ದಳು.

ಅದರಂತೆ ದೂರುದಾರ ಆಕೆಯ ಮನೆಗೆ ಹೋಗಿದ್ದರು. ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಏಕಾಏಕಿ ಬಂದ ಉಳಿದ ಮೂವರು ಆರೋಪಿಗಳು, “ನಾವು ಕ್ರೈಮ್ ಪೊಲೀಸ್ ಸಿಬ್ಬಂದಿ, ನೀವು ವ್ಯಭಿಚಾರದಲ್ಲಿ ತೊಡಗಿದ್ದೀರಾ” ಎನ್ನುತ್ತಾ ಬೆದರಿಸಿ ದೂರುದಾರನ ಬಟ್ಟೆ ಬಿಚ್ಚಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ಬಳಿಕ “ಎರಡು ಲಕ್ಷ ಕೊಡದಿದ್ದರೆ, ನಿಮ್ಮಿಬ್ಬರ ಅಕ್ರಮ ಸಂಬಂಧದ ಕುರಿತು ನಿನ್ನ ಪತ್ನಿಗೆ ಹೇಳುತ್ತೇವೆ” ಎಂದು ಬೆದರಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಂತರ ದೂರುದಾರನ ಮೈಮೇಲಿದ್ದ ಚಿನ್ನದ ಚೈನ್, ಉಂಗುರ ಬಿಚ್ಚಿಸಿಕೊಂಡು 55 ಸಾವಿರ ನಗದು ಪಡೆದುಕೊಂಡು ಸ್ಥಳದಿಂದ ತೆರಳಿದ್ದರು. ಆರೋಪಿಗಳೊಂದಿಗೆ ತಾನೂ ತೆರಳಿದ್ದ ನಯನಾಳ ಬಗ್ಗೆ ಅನುಮಾನಗೊಂಡ ಸಂತ್ರಸ್ತ, ಆಕೆಗೆ ಕರೆ ಮಾಡಿ “ಪೊಲೀಸರಿಗೆ ದೂರು ಕೊಡೋಣ ಬಾ” ಎಂದು ಕರೆದಿದ್ದರು. ಆದರೆ “ದೂರು ಕೊಟ್ಟರೆ ಮಗುವಿನೊಂದಿಗೆ ನಿಮ್ಮ ಮನೆಗೆ ಬಂದು, ನನ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದೀಯ ಎಂದು ನಿನ್ನ ಪತ್ನಿಗೆ ಹೇಳುತ್ತೇನೆ” ಎಂದು ನಯನಾ ಬೆದರಿಸಿದ್ದಳು ಎಂದು ದೂರುದಾರ ಉಲ್ಲೇಖಿಸಿದ್ದಾರೆ.

ಆರೋಪಿಗಳೆಲ್ಲರೂ ಸೇರಿ ವಂಚಿಸಿರುವುದನ್ನು ಅರಿತ ಸಂತ್ರಸ್ತ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಬ್ಯಾಡರಹಳ್ಳಿ ಠಾಣೆ ಪೊಲೀಸರು ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಪತ್ತೆಯಾಗಿರುವ ನಯನಾಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.