ಡೈಲಿ ವಾರ್ತೆ:29/DEC/2024
ಡಿ. 31ಕ್ಕೆ ಸಾಸ್ತಾನ ಟೋಲ್ ಸಮಸ್ಯೆ ವಿರುದ್ಧ ಉಗ್ರ ಪ್ರತಿಭಟನೆ
ಕೋಟ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥವಾಗಿ, ಸಾಸ್ತಾನದಲ್ಲಿ ವಾಹನಗಳಿಂದ ಟೋಲ್ ಸಂಗ್ರಹಿಸಲು ಆರಂಭಿಸಿದಂದಿನಿಂದ ಇಂದಿನವರೆಗೂ ಬಗೆಹರಿಯದ ಟೋಲ್ ಕಂಪೆನಿಗಳ ತೊಂದರೆಯ ವಿರುದ್ಧ ಡಿ. 31 ರ ಮಂಗಳವಾರ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ, ಲಾರಿ ಮಾಲಕರ ಸಂಘ ಮತ್ತಿತರ ಸಂಘ – ಸಂಸ್ಥೆಗಳು ಹಾಗೂ ಸಾರ್ವಜನಿಕರು ಒಂದಾಗಿ ಟೋಲ್ ಕಂಪೆನಿಯ ವಿರುದ್ಧ ಈ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಭಾನುವಾರ ಸಾಲಿಗ್ರಾಮದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯವರು ಈ ಬಗ್ಗೆ ಮಾಧ್ಯಮದವರಿಗೆ ವಿವರಿಸಿದರು
ಸುಮಾರು ಹನ್ನೆರಡು ವರ್ಷಗಳಿಂದಲೂ ಸಾಸ್ತಾನ ಟೋಲ್ ಗೇಟ್ ನಲ್ಲಿ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸ್ಥಳೀಯ ವಾಹನಗಳವರಿಗೆ ಟೋಲ್ ವಿನಾಯಿತಿ ಇತ್ತು. ಮೊದಲು ನವಯುಗ ಕಂಪೆನಿಯವರು ನಿರ್ವಹಿಸುತ್ತಿದ್ದ ಟೋಲ್ ಸಂಗ್ರಹ ಕೆಲಸವನ್ನು ಇದೀಗ ಇಂಗ್ಲೆಂಡ್ ಮೂಲದ ಕೆ ಕೆ ಆರ್ ಕಂಪೆನಿ ವಹಿಸಿಕೊಂಡಿದೆ. ಇದು ಯಾವುದೇ ನಿರ್ಮಾಣ ಅಥವಾ ನಿರ್ವಹಣಾ ಜವಾಬ್ದಾರಿ ಹೊಂದಿರದೆ, ಕೇವಲ ಸುಂಕ ವಸೂಲು ಮಾಡುವ ಕಾರ್ಯವನ್ನಷ್ಟೇ ಮಾಡುತ್ತಿದೆ. ಉದ್ದಕ್ಕೂ ಹೆದ್ದಾರಿಯಲ್ಲಿ ಹೊಂಡ ಗುಂಡಿಗಳು ಆಗಿವೆ. ಪಾದಚಾರಿ ಮಾರ್ಗ ಕಸ, ಹುಲ್ಲುಗಳಿಂದ ಮುಚ್ಚಿಯೇ ಹೋಗಿದೆ. ದಾರಿದೀಪಗಳು ಬೆಳಗುತ್ತಿಲ್ಲ. ರಸ್ತೆ ನಿರ್ವಹಣೆಯೇ ಆಗುತ್ತಿಲ್ಲ. ಆದರೂ ಈ ಕೆ ಕೆ ಆರ್ ಕಂಪೆನಿ ಕಟ್ಟುನಿಟ್ಟಾಗಿ ಸುಂಕ ವಸೂಲು ಮಾಡುತ್ತಿದೆ. ಇದು ಸ್ಥಳೀಯ ವಾಹನಗಳವರಿಂದಲೂ ಸುಂಕ ವಸೂಲು ಮಾಡಲು ತೊಡಗಿದೆ. ಹೋರಾಟ ಸಮಿತಿ, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಯಾರ ಮಾತಿಗೂ ಬೆಲೆ ಕೊಡದ ಕಂಪೆನಿ ರಸ್ತೆ ನಿರ್ವಹಣೆ ಮಾಡದೇ ಸುಂಕವನ್ನು ಮಾತ್ರ ಕಟ್ಟುನಿಟ್ಟಾಗಿ ವಸೂಲು ಮಾಡುತ್ತಿದೆ. ವಾಸ್ತವವಾಗಿ, ರಸ್ತೆ ರಿಪೇರಿ ಮಾಡಲು ಈ ಕೆ ಕೆ ಆರ್ ಕಂಪೆನಿ ಬಳಿ ಯಾವ ಯಂತ್ರೋಪಕರಣಗಳೂ ಇಲ್ಲ. ಎಲ್ಲವೂ ಹೊರ ಗುತ್ತಿಗೆಯಿಂದಲೇ ನಡೆಸಬೇಕು. ಆದರೆ, ಸುಂಕ ವಸೂಲಿ ಮಾತ್ರ ಕಟ್ಟುನಿಟ್ಟಾಗಿದೆ! ಇದು ಸ್ಥಳೀಯರಲ್ಲಿ ಆಕ್ರೋಶ ಉಂಟುಮಾಡಿದೆ.
ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಆಶ್ರಯದಲ್ಲಿ ಈಗಾಗಲೇ ಸಾಕಷ್ಟು ಹೋರಾಟ, ಪ್ರತಿಭಟನೆಗಳು ನಡೆದರೂ ಕಂಪೆನಿ ಜಪ್ಪಯ್ಯ ಎಂದಿಲ್ಲ. ಈ ಹಿಂದಿನ ಪ್ರತಿಭಟನೆಯ ವೇಳೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಂಪೆನಿಯವರೊಂದಿಗೆ ಚರ್ಚಿಸಿ, ಒಂದು ತಿಂಗಳೊಳಗೆ ರಸ್ತೆ ರಿಪೇರಿ ಮಾಡಬೇಕು, ಹಾಗೂ ಸ್ಥಳೀಯರಿಗೆ ಟೋಲ್ ವಿನಾಯಿತಿ ಮುಂದುವರಿಸಬೇಕು ಎಂದು ಆದೇಶಿಸಿದ್ದರೂ ಕಂಪೆನಿ ಅವರ ಆದೇಶಕ್ಕೆ ಕ್ಯಾರೇ ಎಂದಿಲ್ಲ. ಆದರಿಂದ ಹೋರಾಟ ಸಮಿತಿಯ ಆಶ್ರಯದಲ್ಲಿ, ಸಾರ್ವಜನಿಕರು ದೊಡ್ಡ ಮಟ್ಟದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಮಾಬುಕಳದಿಂದ ತೆಕ್ಕಟ್ಟೆಯವರೆಗಿನ ಎಲ್ಲ ಅಂಗಡಿ ಮುಂಗಟ್ಟುಗಳನ್ನೂ ಮಂಗಳವಾರ ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಲಾಗುವುದು. ಈ ಬಗ್ಗೆ ಈಗಾಗಲೇ ಕರಪತ್ರ ಹಂಚಲಾಗಿದೆ.
ಸ್ಥಳೀಯವಾಗಿ ಸುಮಾರು 750 ವಾಹನಗಳು ಟೋಲ್ ವಿನಾಯಿತಿ ಅರ್ಹತೆ ಹೊಂದಿವೆ. ಆದರೆ, ಇದರಿಂದ ಕಂಪೆನಿಗೆ ವಾರ್ಷಿಕ 120 ಕೋಟಿ ರೂ. ನಷ್ಟ ಉಂಟಾಗುತ್ತದೆ ಎಂಬುದು ಕಂಪೆನಿಯ ವಾದ. 750 ವಾಹನಗಳು ಎಷ್ಟು ಬಾರಿ ಟೋಲ್ ಗೇಟ್ ಹಾದುಹೋದರೂ ಇಷ್ಟೊಂದು ಕೋಟ್ಯಂತರ ಟೋಲ್ ಸಂಗ್ರಹವಾಗುವುದಿಲ್ಲ, ಕಂಪೆನಿ ಸುಳ್ಳು ಲೆಕ್ಕ ತೋರಿಸಿ, ಜಿಲ್ಲಾಡಳಿತಕ್ಕೆ ಮೋಸ ಮಾಡುತ್ತಿದೆ ಎಂಬುದು ಹೋರಾಟ ಸಮಿತಿಯ ವಾದ.
ಈ ನಡುವೆ ಸಂಸದರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿ. 30 ರಂದು ಈ ಬಗ್ಗೆ ಒಂದು ಸಭೆ ಕರೆದಿದ್ದಾರೆ. ಅದರಲ್ಲಿ ನ್ಯಾಯ ಸಿಕ್ಕರೆ ಪ್ರತಿಭಟನೆಯನ್ನು ಕೈ ಬಿಡಲಾಗುವುದು. ಇಲ್ಲವಾದರೆ ಟೋಲ್ ಗೇಟ್ ಬಳಿ ನ್ಯಾಯ ಸಿಗುವವರೆಗೂ ಹೋರಾಟವನ್ನು ಮುಂದುವರೆಸಲಾಗುವುದು ಎಂದು ಹೋರಾಟ ಸಮಿತಿಯ ಅಧ್ಯಕ್ಷ ಶ್ಯಾಮಸುಂದರ ನಾಯರಿ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಮಾಜಿ ಕಾರ್ಯದರ್ಶಿ ವಿಠಲ ಪೂಜಾರಿ, ಆಲ್ವಿನ್ ಅಂದ್ರಾದೆ, ನಾಗರಾಜ್ ಗಾಣಿಗ, ರಾಜೇಂದ್ರ ಸುವರ್ಣ, ಭೋಜ ಪೂಜಾರಿ, ಲಾರಿ ಮಾಲಕರ ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ, ಮಹಾಬಲ ಪೂಜಾರಿ ಮೊದಲಾದವರು ಇದ್ದರು.